ಹಾಸನ:ಮೊದಲ ಹಂತದ 15 ದಿನಗಳ ಚಲಿಸು ಕರ್ನಾಟಕ ಸೈಕಲ್ ಯಾತ್ರೆಯು ಸೆ. 14 ರಿಂದ ರಾಜ್ಯಾದ್ಯಂತ ಪ್ರಾರಂಭವಾಗಲಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾ ಸಂಚಾಲಕ ಅಕ್ಮಲ್ ಜಾವಿದ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕವು ಪ್ರಸ್ತುತ ಕೊರೊನಾ ವೈರಸ್‌ನಿಂದ ನಲುಗಿದಂತೆ, ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಿಂದ ಕಳೆದ ಕೆಲವು ದಶಕಗಳಿಂದ ನಿರಂತರವಾಗಿ ಸೊರಗಿದೆ. ಈ ಭ್ರಷ್ಟ ವ್ಯವಸ್ಥೆಯಿಂದ ನಾಡಿನ ಮತ್ತು ಜನರ ಸಂಪತ್ತಿನ ಲೂಟಿಯಾಗುತ್ತಿದೆ. ಕೊರೊನಾ ವೈರಸ್ ಸೋಂಕು ನಮ್ಮಲ್ಲಿ ಅವ್ಯವಸ್ಥೆ ಮತ್ತು ಅಕ್ರಮಗಳನ್ನು ಹೊರಹಾಕಿದೆ ಅದರಲ್ಲೂ ಆರೋಗ್ಯ ಮತ್ತು ಆಡಳಿತ ವ್ಯವಸ್ಥೆಗಳು ಯಾವ ಮಟ್ಟದಲ್ಲಿ ಅಧೋಗತಿಗೆ ತಲುಪಿದೆ ಎಂದರು. ಕಾನೂನು ಮತ್ತು ಅನ್ಯಾಯಕ್ಕೊಳಗಾದ ಜನರನ್ನು ರಕ್ಷಿಸಬೇಕಾದ ಪೊಲೀಸರು ಜನರ ಶೋಷಣೆಗೆ ನಿಂತಿರುವಂತಿದೆ. ಸರ್ಕಾರದ ಮಟ್ಟದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ, ಕೋವಿಡ್ ಸಂಕಷ್ಟದ ಸಮಯದಲ್ಲೂ ಅದರ ಹೆಸರಿನಲ್ಲಿ ಹಣ ಲೂಟಿ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಕುಸಿದಿದ್ದರೂ, ದೇಶದಲ್ಲಿ ಮತ್ತು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಕಿಡಿಕಾರಿದರು.ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು, ಜನರಿಗೆ ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದ ಅವಶ್ಯಕತೆ ಬಗ್ಗೆ ತಿಳಿಸಿ ಮತ್ತು ಅವರ ಕಷ್ಟ-ಕಾರ್ಪಣ್ಯಗಳನ್ನು ಅರಿಯಲು "ಚಲಿಸು ಕರ್ನಾಟಕ’ ಸೈಕಲ್ ಯಾತ್ರೆ ಮೂರು ಹಂತಗಳಲ್ಲಿ ಇದೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಮೊದಲ ಹಂತದ 15 ದಿನಗಳ ಯಾತ್ರೆ ಸೆಪ್ಟೆಂಬರ್ 14, ರಂದು ಕೋಲಾರದಲ್ಲಿ ಆರಂಭವಾಗಿ ಚಿಕ್ಕಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಚಾಮರಾಜನಗರ, ಮೈಸೂರು, ಕೊಡಗು ಜಿಲ್ಲೆಗಳ ಮೂಲಕ ಸಾಗಿ, ಸೆಪ್ಟೆಂಬರ್ 24 ರಂದು ಅರಕಲಗೂಡು ತಲುಪಿ, ಮೂರನೇ ದಿನವಾದ ಸೆಪ್ಟೆಂಬರ್ 25 ರಂದು ಹಾಸನ ಮತ್ತು ಗಂಡಸಿ ಮೂಲಕ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗಿ ತುಮಕೂರಿನ ಶಿರಾದಲ್ಲಿ ಸೆಪ್ಟೆಂಬರ್ 28ರಂದು ಸಮಾರೋಪಗೊಳ್ಳಲಿದೆ ಎಂದರು.