ಹಾಸನ: ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾದ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ಸರ್ಕಲ್ ಬಳಿ ಜರುಗಿದೆ.
ಹಾಸನದಲ್ಲಿ ಬಸ್ ಪಲ್ಟಿ: ಒಬ್ಬ ಸಾವು, 25 ಮಂದಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ಪಲ್ಟಿಯಾದ ಪರಿಣಾಮ ಒಬ್ಬ ಸಾವಿಗೀಡಾಗಿದ್ದು, 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪಟ್ಟಣದ ಶ್ರೀಕಂಠಯ್ಯ ಸರ್ಕಲ್ ಬಳಿ ಜರುಗಿದೆ.
ಅಭಿಷೇಕ್ (29) ಮೃತ ಯುವಕ. ಈತ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಯುವಕ ಎಂದು ಗುರುತಿಸಲಾಗಿದೆ. ಇನ್ನು ಕೆಎಸ್ಆರ್ಟಿಸಿ ಬಸ್ ನಲ್ಲಿದ್ದ 46 ಮಂದಿ ಪ್ರಯಾಣಿಕರಲ್ಲಿ 25ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಸಾರಿಗೆ ಚಾಲಕನ ನಿರ್ಲಕ್ಷ್ಯ ಕೂಡ ಕಾರಣ ಎನ್ನಲಾಗುತ್ತಿದೆ. ಶ್ರೀಕಂಠಯ್ಯ ವೃತ್ತದ ಬಳಿ ಹಾಕಲಾಗಿರುವ ಸ್ಪೀಡ್ ಬ್ರೇಕರ್ ಮೇಲೆ ನಿಧಾನವಾಗಿ ಚಲಿಸದೇ ಏಕಾಏಕಿ ರಭಸವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಕಳೆದ 5 ದಿನಗಳ ಹಿಂದೆ ಇದೇ ಜಾಗದಲ್ಲಿ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿ ಬಸ್ ಜೋಳದ ಹೊಲದ ಪಕ್ಕದ ಗುಂಡಿಗೆ ಪಲ್ಟಿಯಾಗಿ ಬಿದ್ದಿತ್ತು. ಪರಿಣಾಮ 10 ಮಂದಿ ಗಾಯಗೊಂಡಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಮತ್ತೆ ಇಂತಹ ಘಟನೆ ನಡೆದಿದೆ. ಅಪಘಾತ ಹಿನ್ನೆಲೆ ಮಧ್ಯರಾತ್ರಿ ಎರಡು ಗಂಟೆಯ ತನಕ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಹಿರೀಸಾವೆ ಪೊಲೀಸರು ಮತ್ತು ಚನ್ನರಾಯಪಟ್ಟಣದ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಮುಕ್ತಗೊಳಿಸಲು ರಾತ್ರಿಯಿಡೀ ಹರಸಾಹಸ ಪಟ್ಟರು.