ಹಾಸನ: ಹತ್ತಾರು ಬಾರಿ ಹಣ ಪಡೆದ್ರೂ ಸರ್ಕಾರಿ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿಕೊಡದೆ, ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರು ಅಧಿಕಾರಿಗಳಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಭೂಮಾಪನಾಧಿಕಾರಿ ಬ್ರಿಜೇಶ್ ಮತ್ತು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಸಂಶುದ್ದೀನ್ ಅವರನ್ನು ಸಾರ್ವಜನಿಕರು ಖಾಸಗಿ ಕಾರಿನಲ್ಲಿ ಕೂಡಿ ಹಾಕಿ, ಹಿಗ್ಗಾಮುಗ್ಗಾ ಥಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಣ ಪಡೆದು ಕೆಲಸ ಮಾಡದೇ ಸತಾಯಿಸುತ್ತಿದ್ದ ಅಧಿಕಾರಿಗಳು ತಾಲೂಕು ಭೂಮಾಪನ ಅಧಿಕಾರಿಯಾಗಿ ಹಲವು ವರ್ಷಗಳಿಂದ ಬ್ರಿಜೇಶ್ ಕೆಲಸ ಮಾಡುತ್ತಿದ್ದರು. ಬ್ರಿಜೇಶ್ ತಮ್ಮ ವ್ಯಾಪ್ತಿಯ ಸಾಕಷ್ಟು ರೈತಾಪಿ ವರ್ಗದವರ ಭೂ ದಾಖಲಾತಿಗಳನ್ನು ಸರಿಪಡಿಸದೆ ಕಚೇರಿಗೆ ಅಲೆದಾಡಿಸುತ್ತಿದ್ದರು. ಪ್ರತಿಬಾರಿ ಕಚೇರಿಗೆ ಬಂದಾಗಲೆಲ್ಲ ಹಣ ಪಡೆದು ಸುಳ್ಳು ಭರವಸೆಗಳ ಮೂಲಕ ಕಳೆದ ಮೂರು ವರ್ಷಗಳಿಂದ ಸತಾಯಿಸುತ್ತಿದ್ದರು ಎಂದು ಆರೋಪಿಸಿ ಬ್ರಿಜೇಶ್ಗೆ ಜನಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇನ್ನು, ಈ ಗಲಾಟೆ ಬಿಡಿಸಲು ಬಂದ ಭೂ-ದಾಖಲೆಗಳ ಸಹಾಯಕ ನಿರ್ದೇಶಕರಿಗೂ ಕೂಡ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ.
ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಅಧಿಕಾರಿಗಳನ್ನು ಹಾಗೂ ಕೆಲವು ಸಾರ್ವಜನಿಕರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಈ ಸಂಬಂಧ ತಹಶಿಲ್ದಾರರು ಕೂಡ ಸ್ಥಳಕ್ಕಾಗಮಿಸಿ ಘಟನೆಯ ವಿವರವನ್ನು ಪಡೆದು ಜೊತೆಗೆ ರೈತರ ಸಮಸ್ಯೆಗಳನ್ನು ಆಲಿಸಿದ್ರು. ಅಲ್ಲದೇ ವಾರದೊಳಗೆ ಭೂ ದಾಖಲೆಗಳ ಕಾರ್ಯವನ್ನು ಬಗೆಹರಿಸಿ ಕೊಡುವುದಾಗಿ ಸಾರ್ವಜನಿಕರಿಗೆ ಮತ್ತು ರೈತಾಪಿ ವರ್ಗದವರಿಗೆ ಭರವಸೆ ನೀಡಿದ್ರು.