ಸಕಲೇಶಪುರ: ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೋಣಗಳನ್ನು ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಹರಿಯಾಣ ರಾಜ್ಯದ ನೋಂದಣಿಯ ಲಾರಿಯೊಂದರಲ್ಲಿ ಸುಮಾರು 30 ಕೋಣಗಳನ್ನು ಅಕ್ರಮವಾಗಿ ಕೇರಳಕ್ಕೆ ಸಾಗಿಸುತ್ತಿದ್ದಾಗ ತಾಲೂಕಿನ ಮಾರನಹಳ್ಳಿ ಸಮೀಪ ಭಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಕಲೇಶಪುರದಲ್ಲಿ ಕೋಣಗಳ ಸಾಗಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯ ಲಾರಿಯಲ್ಲಿ ಯಾವುದೇ ರೀತಿಯ ಅನುಮಾನ ಬರದಂತೆ ಸಂಪೂರ್ಣವಾಗಿ ಟಾರ್ಪಲ್ ಹಾಕಿ ಕೋಣಗಳನ್ನು ಸಾಗಾಟ ಮಾಡಲಾಗುತ್ತಿತ್ತು. ಗ್ರಾಮಾಂತರ ಠಾಣೆ ಪಿಎಸ್‌ಐ ಚಂದ್ರಶೇಖರ್ ನೇತೃತ್ವದ ತಂಡ ತಕ್ಷಣ ಲಾರಿಯನ್ನು ಪರಿಶೀಲಿಸಿ ಇಬ್ಬರು ಚಾಲಕರನ್ನು ಬಂಧಿಸಿದ್ದು, ಆರೋಪಿಗಳನ್ನು ವಿಕಾಸ್ (25) ಹರಿಯಾಣದ ಕೈತಾಲ್ ಜಿಲ್ಲೆಯ ರಾಜವುಂಡ್ ಗ್ರಾಮದವನು, ಹಾಗೂ ಅನಿಲ್ ಕುಮಾರ (30) ಹರಿಯಾಣದ ಚೋಚರಾನ್ ಗ್ರಾಮದವನು ಎಂದು ತಿಳಿದುಬಂದಿದೆ.
ಹರಿಯಾಣ ರಾಜ್ಯದ ಕರ್ನಾಲ್ ಮೂಲದ ಸಂದೀಪ್ ಕುಮಾರ್ ಎಂಬುವವರು ಪರವಾನಗಿ ಪಡೆಯದೆ ಉತ್ತರ ಪ್ರದೇಶ ರಾಜ್ಯದಿಂದ ಕೋಣಗಳನ್ನು ತುಂಬಿಸಿ ಕೇರಳ ರಾಜ್ಯದ ಪಾಲಕ್ಕಾಡ್‌ಗೆ ಕಳುಹಿಸುತ್ತಿದ್ದರು ಎಂದು ತಿಳಿದುಬಂದಿದೆ. ವೃತ್ತ ನಿರೀಕ್ಷಕ ಗಿರೀಶ್.ಬಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿದ್ದು, ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೋಣಗಳನ್ನು ಮೈಸೂರಿನ ಪಿಂಜರ್ ಪೋಲ್ ಗೋಶಾಲೆಗೆ ಕಳುಹಿಸಿಕೊಡಲಾಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಗೋಸಾಗಾಟ ಮಾಡಲಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕೆಂದು ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ.