ಹಾಸನ :ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಎಂಬ ಕಾರಣಕ್ಕೆ ತಂದೆಯನ್ನು ಮಗನೋರ್ವ ದೊಣ್ಣೆಯಿಂದ ಹೊಡೆದು ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಜರುಗಿದೆ.
ಹೊಳೆನರಸಿಪುರ ತಾಲೂಕಿನ ಕಡವಿನಕೋಟೆ ನಿವಾಸಿ ಶ್ರೀನಿವಾಸ್ (44) ಮಗನಿಂದಲೇ ಕೊಲೆಯಾದ ನತದೃಷ್ಟ ತಂದೆ. ಶ್ರೀನಿವಾಸ್ ಪ್ರತಿ ದಿನ ಕುಡಿದು ಬಂದು ಪತ್ನಿ ಹಾಗೂ ಮಗನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ರೋಸಿ ಹೋದ ಮಗ ತಂದೆಯನ್ನು ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕುಡುಕ ಅಪ್ಪನ ಕೊಲೆ ಮಾಡಿದ ಮಗ ಪ್ರಕರಣದ ವಿವರ :ಶ್ರೀನಿವಾಸ್ 22 ವರ್ಷಗಳ ಹಿಂದೆ ಮೊಸಳೆ ಹೊಸಳ್ಳಿ ಗ್ರಾಮದ ರಾಧಮ್ಮ ಎಂಬುವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ರಾಧಮ್ಮ ತನ್ನ ತಾಯಿಗೆ ಹುಷಾರಿಲ್ಲ ಎಂದು ಹತ್ತು ತಿಂಗಳ ಹಿಂದೆ ತವರು ಮನೆ ಸೇರಿದ್ದರು.
ಶ್ರೀನಿವಾಸ್ ಅನೇಕ ಸಲ ರಾಧಮ್ಮನ ತವರಿಗೆ ಹೋಗಿ ತನ್ನ ಮನೆಗೆ ಬರುವಂತೆ ಪೀಡಿಸುತ್ತಿದ್ದ. ಅಲ್ಲದೇ ಕುಡಿದು ಗಲಾಟೆ ಮಾಡಿ ಕಿರುಕುಳ ನೀಡುತ್ತಿದ್ದ. ಇದೇ ಕಾರಣಕ್ಕೆ ರಾಧಮ್ಮ ತನ್ನ ಗಂಡನ ಮನೆಗೆ ಹೋಗಲು ನಿರಾಕರಿಸುತ್ತಿದ್ದಳು ಎನ್ನಲಾಗಿದೆ.
ಕುಡುಕ ಅಪ್ಪನ ಕೊಲೆ ಮಾಡಿದ ಮಗ : ನಿನ್ನೆಯೂ ಸಹ ಮೊಸಳೆ ಹೊಸಹಳ್ಳಿಗೆ ಬಂದು ತನ್ನೊಂದಿಗೆ ಬರುವಂತೆ ಪತ್ನಿಯ ಜತೆಗೆ ಶ್ರೀನಿವಾಸ್ ಗಲಾಟೆ ಮಾಡಿದ್ದನಂತೆ. ಇದರಿಂದ ರೋಸಿ ಹೋದ ರಾಧಮ್ಮ, ಆಕೆಯ ಸಹೋದರ ಸತೀಶ್ ಮತ್ತು ಪುತ್ರ ಕಿರಣ್ ಸೇರಿ ನೀನು ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತೀಯಾ, ನೀನು ಬದುಕಿರುವುದಕ್ಕಿಂತ ಎಲ್ಲಿಗಾದರೂ ಹೋಗಿ ಸಾಯಿ ಎಂದು ನೋವಿನಿಂದ ಬೈದಿದ್ದರಂತೆ.
ತಾಯಿ ಮನಸ್ಸಿಗೆ ಎಷ್ಟೊಂದು ನೋವಾಗಿದೆ ಅಲ್ಲ ಅಂತಾ ತಿಳಿದು ಮಗ ಕಿರಣ್ ಸ್ಥಳದಲ್ಲಿದ್ದ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದು, ನಂತರ ಆತನನ್ನು ತಳ್ಳಿದಾಗ ಮನೆಯ ಮುಂದೆ ಇದ್ದ ಕಲ್ಲಿಗೆ ತಾಕಿ ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆ ಶ್ರೀನಿವಾಸ್ ಮೃತ ಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸಿಪಿಐ ಸುರೇಶ್ ಹಾಗೂ ಡಿವೈಎಸ್ಪಿ ವಿಜಯಭಾಸ್ಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶಾಂತಿಗ್ರಾಮ ಪೊಲೀಸರು ಆರೋಪಿ ಕಿರಣ್ನನ್ನು ಬಂಧಿಸಿ, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.