ಹಾಸನ:ಸಿಎಂ ಯಡಿಯೂರಪ್ಪ ಮತ್ತು ಸಿಎಂ ಮಗ ಇಬ್ಬರೂ ಶಿರಾ, ಆರ್.ಆರ್ ನಗರ ಕ್ಷೇತ್ರಗಳಲ್ಲಿ 25 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದೇವೆ ಎಂದು ಹೇಳುತ್ತಿದ್ದಾರೆ. ಈ 25 ಸಾವಿರ ಮತ ಪಡೆಯೋಕೆ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂಬುದು ಕೂಡ ಹೇಳಬೇಕು ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಪ್ರಶ್ನಿಸಿದರು.
ಈ ಕುರಿತು ಮಾತನಾಡಿದ ಅವರು, ಬಿಜೆಪಿಯವರು ದುಡ್ಡು ಹಂಚಿದ್ದಾರೆ, ಹಾಗಾಗಿ ಎಷ್ಟು ಮತ ಬರಲಿದೆ ಎಂಬುದು ಅವರಿಗೆ ಗೊತ್ತು. ಎಷ್ಟು ದುಡ್ಡು ಹಂಚಿದ್ದಾರೆ ಎಂದು ಸಿಎಂ ಮತ್ತು ಸಿಎಂ ಮಗ ಬಹಿರಂಗ ಪಡಿಸಲಿ. ಸ್ಥಳೀಯ ಸಂಸ್ಥೆ ಚುನಾವಣೆ ಮೀಸಲಾತಿ ವಿಚಾರದಲ್ಲಿ ಸರ್ಕಾರ ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದೆ. ಎರಡೂ ಉಪಚುನಾವಣೆಯಲ್ಲಿ ಯಾವ ರೀತಿ ಚುನಾವಣೆ ನಡೆದಿದೆ ಎಂಬುದು ಜನರಿಗೆ ಗೊತ್ತಿದೆ. ಮೊದಲನೇ ಕೋಟಾ ಎರಡನೇ ಕೋಟಾ ಎಂದು ಹಂಚಿರೋದು ಮಾಧ್ಯಮಗಳಲ್ಲೇ ಸುದ್ದಿ ಬಂದಿದೆ. ಆದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳದೇ ಸರ್ಕಾರದ ಹಿಡಿತಕ್ಕೆ ಸಿಲುಕಿ ನಲುಗುತ್ತಿದೆ ಎಂದರು.
ಆಜೀವ ಪರ್ಯಂತ ಅಧ್ಯಕ್ಷರು ಅನ್ನೋ ಹಂತಕ್ಕೆ ಬಿಜೆಪಿ ತಲುಪಿದೆ. ಶಿರಾ ಕ್ಷೇತ್ರದ ಒಂದು ಊರಿನಲ್ಲಿ ಅಭ್ಯರ್ಥಿಯನ್ನೇ ಊರೊಳಗಡೆ ಬಿಟ್ಟಿಲ್ಲಾ. ಆದರೂ ಆ ಊರಿನಲ್ಲಿ ಶೇ 80 ರಷ್ಟು ಮತಗಳು ಲೀಡ್ ಇದೆ ಎಂದು ರಾಷ್ಟ್ರೀಯ ಪಕ್ಷದವರು ಹೇಳುತ್ತಿದ್ದಾರೆ. ಆಡಳಿತ ಯಂತ್ರಾಂಗವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಚುನಾವಣಾ ಆಯೋಗ ರಾಜ್ಯದಲ್ಲಿ ಒಂದು ಪಕ್ಷದ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಗುಪ್ತಚರ ಇಲಾಖೆಯನ್ನ ಏನು ಚುನಾವಣೆ ಸಮೀಕ್ಷೆ ಮಾಡೋಕೆ ಬಿಟ್ಟಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಗ್ರಾಮ ಪಂಚಾಯತಿ ಚುನಾವಣೆ ಇಷ್ಟೊತ್ತಿಗೆ ನಡೆಯಬೇಕಿತ್ತು. ಇನ್ನೂ ಕಲೆಕ್ಟ್ ಆಗಿಲ್ಲಾ.. ಯಾವ ಯಾವ ಇಲಾಖೆಯಿಂದ ಎಷ್ಟೆಷ್ಟು ಕಲೆಕ್ಟ್ ಆಗ್ಬೇಕು ಎಂಬ ಲೆಕ್ಕಾಚಾರ ಮಾಡುತ್ತಿದ್ದಾರೆ. ಅವರು ಕಲೆಕ್ಟ್ ಆದ್ಮೇಲೆ ಗ್ರಾಪಂ ಚುನಾವಣೆ ಮಾಡ್ತಾರೆ ಎಂದು ಗಂಭೀರ ಆರೋಪ ಮಾಡಿದರು.
ಶಾಸಕರ ಸಂಬಳವನ್ನೂ ಶೇ 30 ರಷ್ಟು ಕಡಿತ ಮಾಡಿದ್ದಾರೆ. ಅದರಿಂದ ನಮಗೇನು ಬೇಸರವಿಲ್ಲಾ. ನಮ್ಮದು ಪ್ರಾದೇಶಿಕ ಪಕ್ಷ ರಾಷ್ಟ್ರೀಯ ಪಕ್ಷಗಳು ಏನೂ ಮಾತಾಡ್ತಿಲ್ಲಾ. ಎರಡೂ ರಾಷ್ಟ್ರೀಯ ಪಕ್ಷಗಳು ಒಂದಾಗಿದ್ದಾರೋ ಏನೋ ಗೊತ್ತಿಲ್ಲಾ. ನಾವು ಈ ಹಿಂದೆಯೇ ರಾಷ್ಟ್ರೀಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.