ಕರ್ನಾಟಕ

karnataka

ETV Bharat / state

ಹಾಸನ ಉಸ್ತುವಾರಿ ಮಾಧುಸ್ವಾಮಿಗೋ, ಸಿ ಟಿ ರವಿಗೋ? ಚರ್ಚೆ - BJP No one has been appointed in charge of the Hassan district

ಮಾಧುಸ್ವಾಮಿ ಆಗಲಿ, ಸಚಿವ ಸಿ.ಟಿ.ರವಿ ಆಗಲಿ ತಮ್ಮ ಸ್ವಕ್ಷೇತ್ರ, ಜಿಲ್ಲೆ ಬಿಟ್ಟು ಪಕ್ಕದ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರೂ ಹೆಚ್ಚಿನ ಸಮಯ ನೀಡಲು ಸಾಧ್ಯವಿದೆಯೇ? ಈ ನಿಟ್ಟಿನಲ್ಲಿ ಮೊದಲು ತಮ್ಮ ಕ್ಷೇತ್ರ ಬಳಿಕ ಅನ್ಯಕ್ಷೇತ್ರ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಒಬ್ಬ ಸಚಿವರಿಗೆ ಎರಡೆರಡು ಜಿಲ್ಲೆಯ ಉಸ್ತುವಾರಿ ವಹಿಸುವುದು ಅಷ್ಟು ಸುಲಭವಲ್ಲ. ಹಾಗಿದ್ದರೆ ಯಾರು ಜಿಲ್ಲೆಯ ಹೊಣೆ ಹೊರುವವರು ಎಂಬ ಪ್ರಶ್ನೆ ಬಿಜೆಪಿಯನ್ನು ಕಾಡುತ್ತಿದೆ.

ಜಿಲ್ಲಾ ಉಸ್ತುವಾರಿ ಮಾಧುಸ್ವಾಮಿಗೋ, ಸಿ ಟಿ ರವಿಗೋ...

By

Published : Sep 8, 2019, 7:34 PM IST

ಹಾಸನ‌: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ, ಜಿಲ್ಲಾ ಉಸ್ತುವಾರಿ ಯಾರ ಹೆಗಲಿಗೆ ಎಂಬುದು ಇಂದಿಗೂ ಗೊಂದಲವಾಗಿಯೇ ಉಳಿದಿದೆ.

ರಾಜಕೀಯವಾಗಿ ಪ್ರಬಲವಾಗಿರುವ ಜೆಡಿಎಸ್ ಭದ್ರಕೋಟೆಗೆ ಸಮರ್ಥ ಉಸ್ತುವಾರಿ ಸಚಿವರನ್ನೇ ನಿಯೋಜಿಸಬೇಕು ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವಾದರೂ, ರಾಜಕೀಯವಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣನನ್ನು ಎದುರಿಸುವ ಸಾಮರ್ಥ್ಯ ಯಾರಿಗಿದೆ? ಎಂಬ ಚರ್ಚೆ ನಡೆಯುತ್ತಿದೆ.

ಸಚಿವ ಸಂಪುಟ ರಚನೆಯಾದ ದಿನದಿಂದ ಮಾಧುಸ್ವಾಮಿ ಅವರಿಗೆ ಜಿಲ್ಲೆಯ ಉಸ್ತುವಾರಿ ಎಂಬ ಮಾತುಗಳು ಕೇಳಿಬಂದಿತ್ತು. ಜಿಲ್ಲೆಯಲ್ಲಿ ಅತಿವೃಷ್ಟಿ, ಪ್ರವಾಹ ಹಾನಿ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಹಾಗೂ ಸಚಿವ ಸಿ.ಟಿ.ರವಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸುವ ಜತೆಗೆ ಜಿಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿಯನ್ನು ಪಡೆದಿತ್ತು. ಸಮ್ಮಿಶ್ರ ಸರಕಾರ ಅವಿಶ್ವಾಸ ಗೊತ್ತುವಳಿ ಸಂದರ್ಭ ಸಚಿವ ಮಾಧುಸ್ವಾಮಿ, ಪಕ್ಷದ ಪರ ಬ್ಯಾಟಿಂಗ್ ಮಾಡುತ್ತಾ, ಜೆಡಿಎಸ್‌ಗೆ ನಿರಂತರವಾಗಿ ಟಾಂಗ್ ನೀಡಿದ್ದನ್ನು ಗಮನಿಸಿದ್ದ ಬಿಜೆಪಿ ವರಿಷ್ಠರು ಹಾಸನ ಜಿಲ್ಲಾ ಉಸ್ತುವಾರಿಗೆ ಮಾಧುಸ್ವಾಮಿಯೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.

ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ ಎನ್ನುತ್ತಿದ್ದಂತೆ ಕೆಲ ಅಧಿಕಾರಿಗಳು ಸಚಿವರ ಒಲವುಗಳಿಸಲು ಪ್ರಯತ್ನಿಸಿದ್ದರು ಎಂಬ ಸಂಗತಿ ಗುಟ್ಟಾಗಿ ಉಳಿದಿಲ್ಲ.
ಇಷ್ಟೆಲ್ಲಾ ಚರ್ಚೆ, ಕುತೂಹಲದ ಬಳಿಕವೂ ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ ಎಂಬುದು ಇನ್ನೂ ನಿರ್ಧಾರವಾದಂತಿಲ್ಲ. ಸಚಿವ ಮಾಧುಸ್ವಾಮಿ ಅಥವಾ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಉಸ್ತುವಾರಿ ಸಚಿವರಾಗಿ ಬರಲಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ರಾಜಕೀಯ ಲೆಕ್ಕಾಚಾರ
2019 ರ ಲೋಕಸಭೆ ಚುನಾವಣೆಯಲ್ಲಿ ತುಮಕೂರಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ 82,174 ಮತ ಪಡೆದರೆ ಬಿಜೆಪಿ 75,911 ಮತ ಪಡೆದಿದೆ. ರಾಜಕೀಯ ಲೆಕ್ಕಾಚಾರ ಗಮನಿಸಿದಾಗ ಜೆಡಿಎಸ್ ಹಿಡಿತ ತುಮಕೂರು ಜಿಲ್ಲೆಯಲ್ಲೂ ಇದೆ ಎಂಬುದರ ಅರಿವಿಟ್ಟುಕೊಂಡೇ ಸಚಿವ ಮಾಧುಸ್ವಾಮಿ ಹಾಸನ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ.

ಸಿ.ಟಿ.ರವಿಗೆ ಜವಾಬ್ದಾರಿ?
ಸಚಿವ ಸಿ.ಟಿ.ರವಿಗೆ ಜಿಲ್ಲೆಯ ರಾಜಕೀಯದ ಇಂಚಿಂಚು ಸಂಗತಿಗಳು ತಿಳಿದಿದೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರುಗಳ ಒಡನಾಟವೂ ಚೆನ್ನಾಗಿದೆ. ಹೀಗಾಗಿ ಅವರಿಗೆ ಉಸ್ತುವಾರಿ ಹೊಣೆ ನೀಡಿದರೆ ಸಮರ್ಥವಾಗಿ, ಯಾವುದೇ ಗೊಂದಲ, ಗದ್ದಲಕ್ಕೆ ಆಸ್ಪದ ನೀಡದಂತೆ ನಿಭಾಯಿಸಬಲ್ಲರು ಎಂಬ ಲೆಕ್ಕಾಚಾರವೂ ನಡೆದಿದೆ ಎನ್ನಲಾಗಿದೆ.

ಮಾಧುಸ್ವಾಮಿ ಆಗಲಿ, ಸಚಿವ ಸಿ.ಟಿ.ರವಿ ಆಗಲಿ ತಮ್ಮ ಸ್ವಕ್ಷೇತ್ರ, ಜಿಲ್ಲೆ ಬಿಟ್ಟು ಪಕ್ಕದ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರೂ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವೇ ಇಲ್ಲ, ಮೊದಲು ತಮ್ಮ ಕ್ಷೇತ್ರ ಬಳಿಕ ಅನ್ಯಕ್ಷೇತ್ರ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ. ಹೀಗಾಗಿ ಒಬ್ಬ ಸಚಿವರಿಗೆ ಎರಡೆರಡು ಜಿಲ್ಲೆಯ ಉಸ್ತುವಾರಿ ವಹಿಸುವುದು ಅಷ್ಟು ಸುಲಭವಲ್ಲ. ಹಾ ಗಿದ್ದರೆ ಯಾರು ಜಿಲ್ಲೆಯ ಹೊಣೆ ಹೊರುವವರು? ಎಂಬ ಪ್ರಶ್ನೆ ಬಿಜೆಪಿಯವನ್ನು ಕಾಡುತ್ತಿದೆ.

ದೊರಕದ ಸಚಿವ ಸ್ಥಾನ:
ಜಿಲ್ಲೆಯ ಏಳು ಕ್ಷೇತ್ರದಲ್ಲಿ ಬಿಜೆಪಿ, ಹಾಸನ ಕ್ಷೇತ್ರವನ್ನು ಮಾತ್ರ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದ ಕಾರಣ ಶಾಸಕ ಪ್ರೀತಂ ಜೆ.ಗೌಡರಿಗೆ ಸಚಿವ ಸ್ಥಾನ ದೊರಕುತ್ತದೆ ಎಂಬ ನಿರೀಕ್ಷೆ ಇತ್ತು. ಈ ಅವಕಾಶ ಕೈ ತಪ್ಪಿದ್ದರಿಂದ ಹೊರಗಿನವರಿಗೆ ಜಿಲ್ಲೆಯ ಉಸ್ತುವಾರಿ ಹೊಣೆ ನೀಡಬೇಕಿದೆ. ಹಾಸನ ಜಿಲ್ಲೆಯ ಜವಾಬ್ದಾರಿ ಹೊತ್ತು ಬರುವವರು ಅನೇಕ ರಾಜಕೀಯ ಲೆಕ್ಕಾಚಾರ ಹಾಕಿಕೊಂಡೇ ಬರುವ ಕಾರಣ ಹಾಲಿ ಪ್ರಸ್ತಾಪವಾಗುತ್ತಿರುವ ಸಚಿವ ಮಾಧುಸ್ವಾಮಿ, ಸಚಿವ ಸಿ.ಟಿ.ರವಿಯಲ್ಲಿ ಯಾರು ಉಸ್ತುವಾರಿಯ ನೊಗ ಹೊರಲಿದ್ದಾರೆ ಎಂಬುದು ಯಕ್ಷ ಪ್ರಶ್ನೆ.

ABOUT THE AUTHOR

...view details