ಹಾಸನ:ನಾನು ಗೆಲುವು ಪಡೆದಿರುವುದು ಒಂದೇ ಚುನಾವಣೆಯಲ್ಲಿ. ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಯಾರು ಆಕಸ್ಮಿಕವಾಗಿ ಏನೇನೋ ಆಗಿದ್ದಾರೆ ಎಂಬುದನ್ನು ಇತಿಹಾಸ ಪುಟ ತೆರೆದು ನೋಡಿದರೆ ತಿಳಿಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ಶಾಸಕ ಪ್ರೀತಮ್ ಜೆ. ಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ನಗರದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ನಾನು ಆಕಸ್ಮಿಕ ಶಾಸಕನೆಂದು ಹೇಳಿರುವ ಮಾಜಿ ಸಿಎಂ ಕುಮಾರಣ್ಣನವರು ಏನೇ ಮಾತನಾಡಿದರೂ ನನಗೆ ಅದು ಆಶೀರ್ವಾದ ಎಂದುಕೊಳ್ಳುತೇನೆ. ಕುಮಾರಣ್ಣ ನನ್ನ ಹಿತೈಷಿ, ಯಾವಾಗಲೂ ನನ್ನ ಒಳಿತನ್ನೇ ಬಯಸುತ್ತಾರೆ ಎಂದು ನಂಬಿದ್ದೇನೆ. ಪಕ್ಷ ಬೇರೆ ಇದ್ದರೂ ಪ್ರೀತಂ ಗೌಡ ಬಗ್ಗೆ ಅವರಿಗೆ ಕಾಳಜಿ ಹೆಚ್ಚಿದೆ ಎಂದು ವ್ಯಂಗ್ಯವಾಡಿದರು.
ಮೊದಲ ಬಾರಿ ಶಾಸಕನಾಗಿರುವ ನನ್ನ ಬಗ್ಗೆ ಎರಡು ಬಾರಿ ಸಿಎಂ ಆಗಿದ್ದವರು ಮಾತನಾಡಿದ್ದಾರೆ ಎಂದರೆ ನನ್ನ ಶಕ್ತಿ ಏನೆಂದು ಗೊತ್ತಾಗುತ್ತದೆ. ಅವರ ಆಶೀರ್ವಾದವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡುತ್ತೇನೆ. ನಾನು ಯಾವ ಸ್ಪೀಡಲ್ಲೂ ಬಂದಿಲ್ಲ. ಮೂರುವರೆ ವರ್ಷ ಕಷ್ಟಪಟ್ಟು ಜನರ ಮಧ್ಯೆ ಇದ್ದು, ಜನರ ಸೇವೆ ಮಾಡಿಕೊಂಡು ಚುನಾವಣೆಯಲ್ಲಿ ಜನರ ಆಶೀರ್ವಾದ ಪಡೆದುಕೊಂಡು ಶಾಸಕನಾಗಿದ್ದೇನೆ. ಯಾವುದೇ ಕಾರಣಕ್ಕೂ ಆಕಸ್ಮಿಕವಾಗಿ ಶಾಸಕನೂ ಆಗಿಲ್ಲ, ಮಂತ್ರಿಯೂ ಆಗಿಲ್ಲ, ಮುಖ್ಯಮಂತ್ರಿಯೂ ಆಗಿಲ್ಲ. ಆಕಸ್ಮಿಕ ಎಂಬ ಪದ ಯಾರಿಗೆ ಸಮಂಜಸ ಎಂದು ಜನರು ತೀರ್ಮಾನಿಸುತ್ತಾರೆ. ಯಾರು ಆಕಸ್ಮಿಕವಾಗಿ ಯಾರ ನಾಮಬಲದಲ್ಲಿ ಶಾಸಕರಾದ್ರು, ಸಚಿವರಾದರು, ಯಾವ ಸ್ಟ್ರ್ಯಾಟಜಿ ಬಳಸಿ ಅಧಿಕಾರ ಹಿಡಿದರು ಎಂಬುದು ಇಡೀ ರಾಜ್ಯದ ಜನರಿಗೆ ತಿಳಿದಿರುವ ವಿಚಾರವಾಗಿದೆ ಹೆಚ್ಡಿಕೆ ಪ್ರೀತಂ ಗೌಡ ಟಾಂಗ್ ನೀಡಿದ್ರು.