ಹಾಸನ (ಅರಸೀಕೆರೆ): ಅರಸೀಕೆರೆ ನಗರ ಸ್ವಚ್ಛತೆ ಬಗ್ಗೆ ಎಂಎಲ್ಎಗೆ ಏನ್ರಿ ಗೊತ್ತು? ಬರೀ ಪತ್ರಕರ್ತರ ಸಂಘಕ್ಕೆ ಹೋಗಿ ಮಾಧ್ಯಮಗೋಷ್ಟಿ ನಡೆಸುವುದಲ್ಲ. ನಗರದ ಯಾವುದಾದರೂ ಒಂದು ಬಡಾವಣೆ ಸ್ವಚ್ಛವಾಗಿದೆಯಾ ಹೇಳಿ ನೋಡೋಣ! ನಮ್ಮ ಕ್ಷೇತ್ರದ ಎಂಎಲ್ಎ ಅಯೋಗ್ಯ, ಅವನಿಗೇನು ಗೊತ್ತು ಎಂದು ಬಿಜೆಪಿ ಮುಖಂಡ ನಾಲಿಗೆ ಹರಿಬಿಟ್ಟಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಅಣ್ಣ ನಾಯಕನಹಳ್ಳಿ ವಿಜಯ್ ಕುಮಾರ್ ಏಕವಚನದಲ್ಲಿ ಮಾತನಾಡುವ ಮೂಲಕ ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡರನ್ನ ಅಯೋಗ್ಯ ಎಂದು ಜರಿದಿದ್ದಾರೆ.
ನಗರದ ಸ್ವಚ್ಛತೆ ಕುರಿತು ನಗರಸಭೆ ಆಹಾರ ನಿರೀಕ್ಷಕ ರೇವಣ್ಣ ಸಿದ್ದಪ್ಪಗೆ ತರಾಟೆ ತೆಗೆದುಕೊಂಡರು. ಶಾಸಕರ ಬೊಕ್ಕಸ ತುಂಬಿಸಿಕೊಳ್ಳಲು ಅಧಿಕಾರಿಗಳು ಸಾಥ್ ನೀಡುತ್ತಿದ್ದೀರಿ. ನಿಮ್ಮ ನಗರಸಭೆ ಆಯುಕ್ತ ದುಡ್ಡು ಮಾಡುತ್ತಿದ್ದಾರೆ. ಆದರೆ ನಗರ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾದರೆ ಬಡಾವಣೆಗಳ ಜನತೆ ವಾಸಿಸುವುದು ಹೇಗೆ ಎಂದು ಆಕ್ರೋಶದ ಮಾತುಗಳನ್ನಾಡಿದರು.