ಹಾಸನ:ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಮಾತ್ರ ಕಾಂಗ್ರೆಸ್ಗೆ ಹಿಜಾಬ್ ಮತ್ತು ಟಿಪ್ಪು ಸುಲ್ತಾನ್ ಬೇಕಾಗಿದೆ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು. ನಗರದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಾಲಾ-ಕಾಲೇಜಿನಲ್ಲಿ ಸಮವಸ್ತ್ರದ ಶಿಸ್ತು ಪಾಲಿಸಬೇಕೆಂದು ಬಿಜೆಪಿ ಸರ್ಕಾರ ಆದೇಶ ನೀಡಿತ್ತು. ಆದರೆ ಬಿಜೆಪಿ ಹಿಜಾಬ್ ನಿಷೇಧ ಮಾಡಲೇ ಇಲ್ಲ. ಈ ಹಿಂದೆ ನಮ್ಮ ಸರ್ಕಾರವು ಹಿಜಾಬ್ ಶಾಲಾ ಆಡಳಿತ ಮಂಡಳಿಗಳಿಗೆ ಬಿಟ್ಟ ವಿಷಯ, ಅವರು ಏನು ಹೇಳ್ತಾರೋ ಅದನ್ನು ಪಾಲಿಸಬೇಕು ಎಂದು ಹೇಳಿತ್ತು. ನಂತರ ಆ ಸಮುದಾಯದ ಕೆಲವು ಹೆಣ್ಣುಮಕ್ಕಳು ಕೋರ್ಟ್‌ಗೆ ಹೋದರು. ಕೋರ್ಟ್ ಸಹ ಸರ್ಕಾರ ಹೇಳಿರುವುದು ಸರಿ ಇದೆ. ಆಯಾ ಶಾಲಾ-ಕಾಲೇಜುಗಳಿಗೆ ಬಿಟ್ಟದ್ದು. ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಪದ್ಧತಿಯಲ್ಲ, ಅದನ್ನು ನೀವೇ ಮಾಡಿಕೊಂಡಿದ್ದೀರಿ ಎಂದು ಆದೇಶಿಸಿದೆ ಎಂದು ಹೇಳಿದರು.
ಸಿಎಂ ಹಿಜಾಬ್ ಹೇಳಿಕೆಗೆ ಆಕ್ರೋಶ: ಹಿಜಾಬ್ ನಿಷೇಧ ವಾಪಸ್ ಪಡೆಯಲು ಹೇಳಿದ್ದೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಈಗ ಹಿಜಾಬ್ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಇದರ ನಡುವೆ ಸಿಎಂ ಹಿಜಾಬ್ ನಿಷೇಧ ಆದೇಶ ವಾಪಸ್ ತಗೊಂಡಿದ್ದೀವಿ ಎಂದರೆ, ಕಾನೂನು ಉಲ್ಲಂಘನೆ ಮಾಡಿದಂತೆ ಅಲ್ಲವೇ?. ಈ ಸರ್ಕಾರ ಕಾನೂನು ಮತ್ತು ಕೋರ್ಟ್ ಆದೇಶದ ವಿರುದ್ದ ನಡೆದುಕೊಳ್ಳುತ್ತಿದೆ. ಧರ್ಮ ಸಂಘರ್ಷ ಮಾಡಬೇಕೆನ್ನುವುದು ಕಾಂಗ್ರೆಸ್ ಉದ್ದೇಶ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಬರಗಾಲ ಪರಿಸ್ಥಿತಿ ಗಂಭೀರವಾಗಿದೆ. ನಾಲ್ಕು ತಿಂಗಳಿನಿಂದ ಬರ ಇದೆ ಎಂದು ಹೇಳುತ್ತಿದ್ದೀರಿ. ಆದರೆ ರೈತರಿಗೆ ಏನು ಕೊಟ್ಟಿದ್ದೀರಿ? ಒಂದು ರೂಪಾಯಿಯೂ ಅವರ ಖಾತೆಗೆ ಬಂದಿಲ್ಲ. ಮತ್ತೆ ಯಾವುದಕ್ಕೆ ಸರ್ಕಾರ ನಡೆಸುತ್ತಿದ್ದೀರಿ ಎಂದರು.