ಹಾಸನ :ಕೊರೊನಾ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ಎಡವಿದ್ದೀವಿ ಅನ್ನುವುದು ಸಮರ್ಪಕವಲ್ಲ. ಸ್ವೀಡನ್ ಹೆಚ್ಚು ವೈದ್ಯಕೀಯ ಸೌಲಭ್ಯವಿರುವ ದೇಶ. ಅವರಿಗೂ ಎರಡನೇ ಅಲೆಯಿಂದ ಸಾವು-ನೋವು ತಡೆಯಲು ಆಗಲಿಲ್ಲ. ನಮ್ಮ ದೇಶದಲ್ಲಿಯೂ ಸಾವು-ನೋವು ತಡೆಯಲು ಸಾಧ್ಯವಾಗಿಲ್ಲ. ಇದಕ್ಕೆ ಬಿಜೆಪಿ ಕಾರಣ ಎನ್ನುವುದು ಸರಿಯಲ್ಲ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನಗರದ ಪ್ರವಾಸಿ ಮಂದಿರಲ್ಲಿ ಮಾತನಾಡಿದ ಅವರು, ಯೂರೋಪ್ ಖಂಡದಲ್ಲಿ 48 ದೇಶ, 74 ಕೋಟಿ ಜನರಿದ್ದಾರೆ. ನಮ್ಮ ದೇಶದಲ್ಲಿ 120 ಕೋಟಿ ಜನಸಂಖ್ಯೆಯಿದೆ. ಕೊರೊನಾ ಯಾವ ದೇಶವನ್ನು ಬಿಟ್ಟಿಲ್ಲ. ಅಮೆರಿಕ ಅತ್ಯಂತ ಶ್ರೀಮಂತ ರಾಷ್ಟ್ರ. ಅಲ್ಲಿಯೂ ಸಾವು-ನೋವುಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಅಂತಹುದರಲ್ಲಿ ಕೇವಲ ನಮ್ಮ ದೇಶದಲ್ಲಿ ಬಿಜೆಪಿಯನ್ನು ಬೊಟ್ಟು ಮಾಡಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕೊರೊನಾ ಎರಡನೇ ಅಲೆ ಬರುವುದು ಮುಂಚಿತವಾಗಿಯೇ ಗೊತ್ತಿತ್ತು. ಮೂರರಿಂದ ನಾಲ್ಕು ಪಟ್ಟು ಹೆಚ್ಚು ಬರುತ್ತದೆ ಎಂದುಕೊಂಡಿದ್ದೆವು. ಆದರೆ 15 ಪಟ್ಟು ಹೆಚ್ಚು ಬರುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಹಲವರು ಹಲವು ರೀತಿಯ ಆಪಾದನೆಗಳನ್ನು ಮಾಡುತ್ತಿದ್ದಾರೆ. ಉಪಯೋಗಿಸಲು ಆಗದಿರುವ ಪದಗಳನ್ನು ಪ್ರಧಾನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಳಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ..?
ಕೋವಿಡ್ ಮಾರಣಾಂತಿಕ ಹೊಡೆತಕ್ಕೆ ಪ್ರತಿಪಕ್ಷದವರು ವ್ಯಕ್ತಿಯನ್ನು, ಸರ್ಕಾರವನ್ನು ಹೊಣೆ ಮಾಡುತ್ತಿದ್ದಾರೆ. ಕರ್ನಾಟಕದ ಬಗ್ಗೆ ಆಪಾದನೆ ಮಾಡುವ ಅವರು ಮಹಾರಾಷ್ಟ್ರ, ಕೇರಳ, ಜಾರ್ಖಂಡ್, ದೆಹಲಿಯಲ್ಲಿ ಯಾರನ್ನು ಆಪಾದನೆ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಕರ್ಫ್ಯೂ ಜಾರಿಯಲ್ಲಿದ್ರೂ ಹರಡುತ್ತಿದೆ ವೈರಸ್.. ಇಂದು ಕೂಡ 30 ಸಾವಿರ ಗಡಿ ದಾಟಿದ ಕೊರೊನಾ!
ಆ ರಾಜ್ಯಗಳಲ್ಲಿ ಸಾವು-ನೋವುಗಳು ಹೆಚ್ಚಾಗಿದೆ. ಅಲ್ಲೆಲ್ಲಾ ಕಾಂಗ್ರೆಸ್ ಹಾಗೂ ಇತರೆ ಸರ್ಕಾರ ಆಡಳಿತದಲ್ಲಿದೆ. ಅಲ್ಲಿ ಯಾರನ್ನು ಟಾರ್ಗೆಟ್ ಮಾಡಿ ಆಪಾದನೆ ಮಾಡುತ್ತಾರೆ. ಇದೊಂದು ಮೆಡಿಕಲ್ ಎಮರ್ಜೆನ್ಸಿ ಅಂಥಾ ಯೋಚನೆ ಮಾಡಬೇಕು. ಟಾರ್ಗೆಟ್ ಮಾಡಿ ಮಾಡುವ ರಾಜಕಾರಣವಲ್ಲ. ಭಾರತ ದೇಶ ವ್ಯಾಕ್ಸಿನ್ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ವ್ಯಾಕ್ಸಿನ್ ಹಾಕಿಸಿಕೊಂಡ ದೇಶದಲ್ಲಿ ಭಾರತ ಮೊದಲಿದೆ ಎಂದು ಸಿ.ಟಿ.ರವಿ ಭರವಸೆ ವ್ಯಕ್ತಪಡಿಸಿದರು.
ಸಂಕ್ರಮಣ ಸಂಕಷ್ಟ ಕಾಲ..!
ಏನು ಹೆಚ್ಚು ಮಾಡಬೇಕು ಅದನ್ನು ಪ್ರಯತ್ನ ಮಾಡುತ್ತಿದ್ದೇವೆ. ನಾವು ಇನ್ನೊಬ್ಬರ ನೆರವಿಗೆ ಹೋದ ಪರಿಣಾಮ ಬೇರೆ ದೇಶಗಳು ನಮ್ಮ ನೆರವಿಗೆ ಬಂದಿವೆ. ಜಾಗತಿಕವಾಗಿ ಭಾರತ ಅತ್ಯಂತ ಹೆಚ್ಚು ಮಿತ್ರ ದೇಶಗಳನ್ನು ಹೊಂದಿರುವ ದೇಶ. ಎಂಥೆಂತಹ ಕಷ್ಟವನ್ನು ನಮ್ಮ ದೇಶ ಎದುರಿಸಿದೆ. ಈ ಕೊರೊನಾ ಕಷ್ಟವನ್ನು ಎದುರಿಸಿ ಭಾರತ ಬಚಾವ್ ಆಗುತ್ತದೆ. ಸಂಕ್ರಮಣ ಸಂಕಷ್ಟ ಕಾಲ. ಅದನ್ನು ಎದುರಿಸಿ ಯಶಸ್ವಿಯಾಗುತ್ತೇವೆ. ಕಾಂಗ್ರೆಸ್ ಪಕ್ಷ ನೆರವಿಗೆ ಬರುವ ಯೋಗದಾನ ಮಾಡಬೇಕು ಹೊರತು ಟೀಕೆ ಮಾಡಬಾರದು ಎಂದು ಸಿ.ಟಿ.ರವಿ ಹೇಳಿದರು.
ಸರ್ಕಾರ ಮೈಮರೆತಿಲ್ಲ, ಒಂದು ಲ್ಯಾಬ್ ನಿಂದ ಎರಡು ಸಾವಿರ ಲ್ಯಾಬ್ ಗೆ ಬಂದಿದ್ದೇವೆ. ಈ ತೀವ್ರತೆಯ ಕಲ್ಪನೆ ಯಾರಿಗೂ ಬಂದಿಲ್ಲ. ಕೊರೊನಾ ಹೆಚ್ಚಳಕ್ಕೆ ಚುನಾವಣೆಯು ಒಂದು ಕಾರಣವಾಗಿರಬಹುದು, ಆದರೆ ಚುನಾವಣೆಯೇ ಕಾರಣವಲ್ಲ. ಈಗ ಸಂಕಷ್ಟವನ್ನು ಎದುರಿಸಬೇಕು. ಕೊರೊನಾ ನಿರ್ವಹಣೆ ಬಗ್ಗೆ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ನನಗೆ ತೃಪ್ತಿಯಿಲ್ಲ. ಇನ್ನಷ್ಟು ಕ್ರಮಗಳನ್ನು ಕೈಗೊಂಡು ಸೌಲಭ್ಯಗಳನ್ನು ಒದಗಿಸಬೇಕಿತ್ತು. ಆದರೆ ಏನು ಮಾಡಿಯೇ ಇಲ್ಲ ಅಂತ ನಾನು ಹೇಳಲ್ಲ ಎಂದರು.