ಹಾಸನದಲ್ಲಿ ಲಾಕ್ಡೌನ್ ಕೊಂಚ ಸಡಿಲಿಕೆ: ಸಚಿವ ಮಾಧುಸ್ವಾಮಿ - ಹಾಸನದಲ್ಲಿ ಲಾಕ್ಡೌನ್ ಕೊಂಚ ಸಡಿಲಿಕೆ ಇರಲಿದೆ
ನಗರ ಪ್ರದೇಶಗಳಲ್ಲಿ ಯಾವುದೇ ಕೈಗಾರಿಕೆ, ಇತರೆ ವಾಣಿಜ್ಯ ವ್ಯಾಪಾರಕ್ಕಾಗಲಿ ಅವಕಾಶವಿಲ್ಲ. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಅಂಗಡಿ ತೆರೆದು ನಂತರ ಬಾಗಿಲು ಹಾಕಬೇಕು. ಮದ್ಯ ಮಾರಾಟಕ್ಕೆ ಮೇ 3ರ ತನಕ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
![ಹಾಸನದಲ್ಲಿ ಲಾಕ್ಡೌನ್ ಕೊಂಚ ಸಡಿಲಿಕೆ: ಸಚಿವ ಮಾಧುಸ್ವಾಮಿ bit relaxation of lockdown at Hassan](https://etvbharatimages.akamaized.net/etvbharat/prod-images/768-512-6921334-910-6921334-1587721864579.jpg)
ಹಾಸನ: ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪತ್ತೆಯಾಗದ ಹಿನ್ನೆಲೆ ಕೊಂಚ ಸಡಿಲಿಕೆ ನೀಡಿದ್ದು, ಉಳಿದಂತೆ ಯಥಾಸ್ಥಿತಿಯಲ್ಲಿ ಲಾಕ್ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ, ನೀರಾವರಿ, ಲೋಕೋಪಯೋಗಿ ಕಾಮಗಾರಿಗಳನ್ನು ನಡೆಸಲು ನಿರ್ಧಾರ ಮಾಡಲಾಗಿದೆ. ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ಅಲ್ಲದೆ ಕೃಷಿ ಚಟುವಟಿಕೆ ಮತ್ತು ತರಕಾರಿ ಮಾರುಕಟ್ಟೆಗೆ ಯಾವುದೇ ನಿರ್ಬಂಧವಿಲ್ಲ ಎಂದರು.
ಅನಿವಾರ್ಯತೆ ಇದ್ದರೆ ಅಂತರ್ ಜಿಲ್ಲೆಗೆ ಕಾರ್ಮಿಕರು ಸಂಚರಿಸಲು ಅನುಮತಿ ನೀಡಲಾಗಿದ್ದು, ನಗರ ಪ್ರದೇಶದ ಯಾವುದೇ ಕೈಗಾರಿಕೆಗೆ ಅವಕಾಶವಿಲ್ಲ. ಆದರೆ ನಗರದ ಹೊರವಲಯದಲ್ಲಿರುವ ಕೈಗಾರಿಕೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸಿಬ್ಬಂದಿ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ ಸಿಬ್ಬಂದಿಗೆ ಯಾವುದೇ ಪಾಸ್ ನೀಡುವುದಿಲ್ಲ. ಬದಲಿಗೆ ಕಂಪನಿ ಮಾಲೀಕರು ತಮ್ಮ ಸ್ವಂತ ವಾಹನಗಳ ಮೂಲಕ ಕಾರ್ಮಿಕರನ್ನು ಕರೆತರುವ ಮತ್ತು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಕಾರ್ಯವನ್ನು ಮಾಡಬೇಕು. ಜಿಲ್ಲಾಡಳಿತದ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ನೀಡಿರುವ ಅನುಮತಿಯನ್ನು ವಾಪಸ್ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ತುಮಕೂರು ಮತ್ತು ಹಾಸನ ಜಿಲ್ಲೆಯಲ್ಲಿ ತೆಂಗು ಮತ್ತು ಕೊಬ್ಬರಿಯನ್ನು ಅತಿ ಹೆಚ್ಚು ಬೆಳೆಯುವುದರಿಂದ ಹೊರ ರಾಜ್ಯಗಳಿಗೆ ಕೊಬ್ಬರಿ ರಫ್ತು ಮಾಡಲು ಅವಕಾಶ ನೀಡಿದ್ದು, ಕೊಬ್ಬರಿ ಸಾಗಿಸುವ ಲಾರಿ ಚಾಲಕರು ವಾಪಸ್ ಮನೆಗೆ ಹೋಗಬೇಕಾದರೆ ಹದಿನಾಲ್ಕು ದಿನಗಳ ಕಾಲ ಗೃಹಬಂಧನದಲ್ಲಿ ಇರಬೇಕು. ಜೊತೆಗೆ ಕೊಬ್ಬರಿ ಮಾರುಕಟ್ಟೆಯ ಸ್ಥಳದಲ್ಲಿ ಅವರೊಂದಿಗೆ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಇನ್ನು ನಗರ ಪ್ರದೇಶಗಳಲ್ಲಿ ಯಾವುದೇ ಕೈಗಾರಿಕೆ, ಇತರೆ ವಾಣಿಜ್ಯ ವ್ಯಾಪಾರಕ್ಕೆ ಅವಕಾಶವಿಲ್ಲ. ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಅಂಗಡಿ ತೆರೆದು ನಂತರ ಬಾಗಿಲು ಹಾಕಬೇಕು. ಮದ್ಯ ಮಾರಾಟಕ್ಕೆ ಮೇ 3ರ ತನಕ ಅವಕಾಶ ಇಲ್ಲ. ಅಕ್ರಮ ಮದ್ಯ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದ್ರು.
ಅಪಘಾತದಲ್ಲಿ ಮೃತಪಟ್ಟ ಕರ್ತವ್ಯದಲ್ಲಿದ್ದ ಆಂಬುಲೆನ್ಸ್ ಚಾಲಕ ಕೃಷ್ಣಮೂರ್ತಿ ಕುಟುಂಬಕ್ಕೆ 20 ಲಕ್ಷ ಪರಿಹಾರ ನೀಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿದ್ದು, ಆದಷ್ಟು ಬೇಗ ಪರಿಹಾರ ನೀಡುವುದಾಗಿ ತಿಳಿಸಿದರು.
TAGGED:
bit relaxation of lockdown