ಹಾಸನ:ಪೊಲೀಸ್ ಇಲಾಖೆ ಮತ್ತು ಸಿಬ್ಬಂದಿ ಎಷ್ಟೇ ಜಾಗೃತಿ ಮೂಡಿಸಿ, ಕಠಿಣ ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕೆಲವರು ಬುದ್ಧಿ ಕಲಿಯುತ್ತಿಲ್ಲ. ಅಪ್ರಾಪ್ತರ ಕೈಯಲ್ಲಿ ವಾಹನಗಳನ್ನು ಕೊಡಬಾರದು ಮತ್ತು ಅವರು ವಾಹನಗಳನ್ನು ಓಡಿಸುವಂತಿಲ್ಲ ಎಂಬ ನಿಯಮ ಇದ್ದರೂ ಸಹ ತಪ್ಪುಗಳು ಮರುಕಳಿಸುತ್ತಲೇ ಇವೆ. ಇಂತಹದ್ದೇ ಒಂದು ಘಟನೆ ನಗರದಲ್ಲಿ ನಡೆದಿದೆ. ಬುಧವಾರ ರಾತ್ರಿ 9 ಗಂಟೆಗೆ ಅಪ್ರಾಪ್ತ ವಯಸ್ಸಿನ ಬಾಲಕರು ಬೈಕ್ ವ್ಹೀಲಿಂಗ್ ಮಾಡಿದ ಪರಿಣಾಮ ರಸ್ತೆಯಲ್ಲಿ ಹೊರಟಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದ್ದಾರೆ. ರಭಸವಾಗಿ ಡಿಕ್ಕಿ ಹೊಡದಿರುವುದರಿಂದ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಭೂಮಿಕ ನಗರದ ಸಹ್ಯಾದ್ರಿ ವೃತ್ತದಲ್ಲಿನ ಪುಡ್ ಕೋರ್ಟ್ನಲ್ಲಿ ಊಟ ಮಾಡಿಕೊಂಡು ವಿದ್ಯಾರ್ಥಿನಿಯರು ತಮ್ಮ ರೂಮಿಗೆ ವಾಪಸ್ ಹೋಗುತ್ತಿದ್ದರು. ಎದುರಿನಿಂದ ಬೈಕ್ ವ್ಹೀಲಿಂಗ್ ಮಾಡಿಕೊಂಡು ಬಂದ ಇಬ್ಬರು ಅಪ್ರಾಪ್ತರು, ವಿದ್ಯಾರ್ಥಿನಿಯರಾದ ಭೂಮಿಕ ಹಾಗೂ ಸಿಂಚನಾಗೆ ಗುದ್ದಿದ್ದು, ಈ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯರು, ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಲಾಯಿತು. ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲು ವೈದ್ಯರು ಸೂಚಿಸಿದ್ದಾರೆ. ಸಿಂಚನ ಕಾಲಿಗೆ ಪೆಟ್ಟು ಬಿದ್ದಿದ್ದು, ಆಕೆಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.