ಭವಾನಿ ರೇವಣ್ಣ ಮಾತನಾಡುತ್ತಿರುವುದು ಹಾಸನ:ನಾನೇ ಹಾಸನದ ಜೆಡಿಎಸ್ ಅಭ್ಯರ್ಥಿ. ಇನ್ನು ಸ್ವಲ್ಪದರಲ್ಲೇ ಪಕ್ಷದ ವರಿಷ್ಠರು ನನ್ನ ಹೆಸರನ್ನು ಪ್ರಕಟ ಮಾಡಲಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಪತ್ನಿ ಜಿ.ಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ ಸ್ವಯಂ ಘೋಷಿಸಿಕೊಂಡಿದ್ದಾರೆ. ಹಾಸನ ತಾಲೂಕಿನ ಸಾಲಗಾಮೆ ಬಳಿ ನಡೆದ ಅಣ್ಣಪ್ಪ ಸ್ವಾಮಿ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನನ್ನ ಪತಿ ಎಚ್.ಡಿ ರೇವಣ್ಣ ಅವರು ಮಂತ್ರಿಯಾಗಿದ್ದಾಗ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.
ಕಳೆದ ಬಾರಿ ಹಾಸನ ವಿಧಾನಸಭಾ ಕ್ಷೇತ್ರ ಬಿಜೆಪಿ ಪಾಲಾಗಿದ್ದರಿಂದ ಇನ್ನು ಸಾಕಷ್ಟು ಕೆಲಸ ಕಾರ್ಯಗಳು ಹಾಗೆಯೇ ಉಳಿದುಕೊಂಡಿದೆ. ಅದನ್ನು ಈ ಬಾರಿ ಸಂಪೂರ್ಣಗೊಳಿಸುವ ಕೆಲಸವನ್ನು ನಾವು ಮಾಡುತ್ತೇವೆ ಮತ್ತು ಈ ಬಾರಿ ಹಾಸನದಲ್ಲಿ ಮತ್ತೆ ಜೆಡಿಎಸ್ ಬರಲಿದೆ ಎಂದು ಭವಾನಿ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನರ ಪರಿಚಯ ಇದ್ದರೆ, ಊರಿನ ಪರಿಚಯ ಆಗುತ್ತದೆ. ಮುಂದಿನ ದಿನಗಳಲ್ಲಿ ಕೆಲಸ ಮಾಡಲು ನನಗೂ ಒಳ್ಳೆಯದು, ಅನುಕೂಲ ಆಗಲಿದೆ. ಅದಕ್ಕಾಗಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಕೆಲಸ ಮಾಡಲು, ಭಗವಂತ ನನಗೆ ಆಶೀರ್ವಾದ ಮಾಡಲಿ ಎಂದು ಬೇಡುವೆ. ಮತ್ತೊಮ್ಮೆ ಈ ಊರಿಗೆ ಬರುವೆ, ನಿಮ್ಮನ್ನು ಮತ್ತೆ ಭೇಟಿ ಮಾಡುವೆ ಎಂದು ಸ್ಥಳೀಯರಿಗೆ ಭರವಸೆ ನೀಡಿ, ಬೇರೆ ಕಾರ್ಯಕ್ರಮದ ನಿಮಿತ್ತ ಭವಾನಿ ರೇವಣ್ಣ ನಿರ್ಗಮಿಸಿದರು.
ಇದನ್ನೂ ಓದಿ:ರಾಜಕೀಯ ಮಾಡುವುದಿದ್ರೆ ಮಂಡ್ಯದಲ್ಲೆ, ಮಂಡ್ಯ ಬಿಡುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್
ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಈಗಾಗಲೇ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಇನ್ನೂ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಈ ಹಿನ್ನೆಲೆ ಹಾಸನ ಕ್ಷೇತ್ರದಿಂದ ಯಾರು ಸ್ಪರ್ಧಿಸುತ್ತಾರೆ? ಎಂಬ ಪ್ರಶ್ನೆ ಜನರಲ್ಲಿತ್ತು. ಅಲ್ಲದೇ ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಭವಾನಿ ರೇವಣ್ಣ ಹೆಸರು ಕೂಡ ಕೇಳಿಬರುತ್ತಿತ್ತು. ಈ ಎಲ್ಲಾ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ತಾವೇ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ಭವಾನಿ ರೇವಣ್ಣ ಅವರೇ ಸ್ವಯಂ ಆಗಿ ಘೋಷಣೆ ಮಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ಭವಾನಿ ರೇವಣ್ಣ ಒಂದು ದಿನ ಎಂಎಲ್ಎ ಆಗೇ ಆಗ್ತಾರೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಈ ಮೊದಲು ಹೇಳಿದ್ದರು. ಆ ಮಾತಿಗೆ ಪುಷ್ಟಿ ನೀಡುವಂತೆ ಭವಾನಿ ರೇವಣ್ಣ ತಾವು ಹಾಸನ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.
ರಾಮನಗರದಿಂದ ನಿಖಿಲ್ ಸ್ಪರ್ಧಿ: ರಾಮನಗರ ವಿಧಾನಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿ ಎಂಬುದು ಈಗಾಗಲೇ ಖಚಿತವಾಗಿದೆ. ಪುತ್ರನಿಗಾಗಿ ಅನಿತಾ ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ನಿಖಿಲ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ವಿಧಾನಸಭಾ ಚುನಾವಣೆ ಬಹಿಷ್ಕಾರದ ಕೂಗು..ಬ್ಯಾನರ್ ಅಳವಡಿಕೆ