ಹಾಸನ:ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೇಲೂರು ಚೆನ್ನಕೇಶವ ಸನ್ನಿಧಿಯಲ್ಲಿ ಅರೆ ಮಿಲಿಟರಿ ಪಡೆಯ ಬಂದೋಬಸ್ತಿನಲ್ಲಿ ಕುರಾನ್ ಪಠಣೆ ಇಲ್ಲದೆ ರಥೋತ್ಸವ ಯಶಸ್ವಿಯಾಗಿ ಜರುಗಿದೆ. ಈ ಹಿಂದೆ ರಥೋತ್ಸವದ ವೇಳೆ ಕುರಾನ್ ಪಠಣೆ ಮಾಡುತ್ತಿದ್ದರು. ಆದರೆ, ಕಳೆದ ವರ್ಷದಿಂದ ಹಿಂದೂಪರ ಸಂಘಟಣೆಗಳಿಂದ ವಿರೋಧ ವ್ಯಕ್ತವಾಗಿತ್ತು.
ಈ ಬಾರಿ ಕುರಾನ್ ಪಠಣೆ ಮಾಡಿಲ್ಲ - ಸೈಯದ್ ಸಜಾದ್ ಭಾಷಾ ಖಾದ್ರಿ.. ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಇಂದು ಇತಿಹಾಸ ಪ್ರಸಿದ್ಧ ಬೇಲೂರು ಚೆನ್ನಕೇಶವ ರಥೋತ್ಸವ ಜರುಗಿತು. ಚನ್ನಕೇಶವನ ರಥೋತ್ಸವಕ್ಕೆ ಕುರಾನ್ ಪಠಣೆ ಮಾಡಬಾರದು ಎಂದು ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೇ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಕುರಾನ್ ಪಠಣೆ ಮಾಡಲು ಬಂದಿದ್ದ ದೊಡ್ಡ ಮೇದೂರು ಗ್ರಾಮದ ಸೈಯದ್ ಸಜಾದ್ ಭಾಷಾ ಖಾದ್ರಿ ಅವರು ಈ ಬಾರಿ ಕೇವಲ ದೇವಸ್ಥಾನದ ಮುಂಭಾಗದ ಮೆಟ್ಟಿಲ ಬಳಿ ಮುಸ್ಲಿಂ ಧರ್ಮದ ಶ್ಲೋಕ ಹೇಳಿ ವಂದನೆ ಸಲ್ಲಿಸಿದ್ದು, ಕುರಾನ್ ಪಠಣೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಪೊಲೀಸರಿಂದ ಬಿಗಿ ಬಂದೋಬಸ್ತ್.. ಇನ್ನು, ಮುಸ್ಲಿಂ ಧರ್ಮದ ಪ್ರಕಾರ ಶ್ಲೋಕ ಹೇಳಲು ಮುಂದಾದ ವೇಳೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ‘ಜೈ ಶ್ರೀ ರಾಮ್ ನಾವೆಲ್ಲ ಹಿಂದೂ ನಾವೆಲ್ಲ ಒಂದು’ ಎಂದು ಘೋಷಣೆ ಕೂಗಿ ಮುಸ್ಲಿಂ ಧರ್ಮದ ಪ್ರಾರ್ಥನೆಗೆ ಅಡ್ಡಿಪಡಿಸಿದ ಘಟನೆಯು ಕೂಡ ನಡೆಯಿತು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.