ಹಾಸನ : ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸುವ ಜೊತೆಗೆ ಸಕಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಆಸ್ಪತ್ರೆಗಳನ್ನು ಸನ್ನದ್ಧವಾಗಿರಿಸಿ ಎಂದು ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆ ನಡೆಸಿ ಕೊರೊನಾ ವೈರಸ್ ತಡೆಯುವಲ್ಲಿ ಕೈಗೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ತಾಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದು ಮಾಹಿತಿ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿರಬೇಕು ಎಂದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸಭೆ ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಿ. ವಿದೇಶದಿಂದ ಬಂದರವ ಮೇಲೆ ನಿಗಾ ವಹಿಸಿ. ಒಂದು ವೇಳೆ ಸೋಂಕು ಪತ್ತೆಯಾದಲ್ಲಿ ಮುಂಜಾಗ್ರತೆ ವಹಿಸಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿರಿ ಎಂದು ಸೂಚಿಸಿದರು. ಸರ್ಕಾರಿ ಆಸ್ಪತ್ರೆ ವೈದ್ಯರು ನಿಗದಿತ ಸಮಯಕ್ಕೆ ಹಾಜರಾಗಬೇಕು. ಹೆಚ್ಚಿನ ಸಾಧನ ಸಲಕರಣೆಗಳು, ವೆಂಟಿಲೇಟರ್ಗಳ ಪೂರೈಕೆ ಹಾಗೂ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎ.ಪರಮೇಶ್ ಮಾತನಾಡಿ, ಕೊರೊನಾ ಮುಂಜಾಗ್ರತಾ ಕ್ರಮದ ಸಲುವಾಗಿ ಯಾವುದೇ ಅಗತ್ಯ ಸೌಲಭ್ಯಗಳ ತುರ್ತು ಇದ್ದಲ್ಲಿ ತಕ್ಷಣವೇ ಗಮನಕ್ಕೆ ತರುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು. ಮಾಸ್ಕ್, ಔಷಧೋಪಚಾರಗಳ ಖರೀದಿಗೆ ಈಗ ಲಭ್ಯವಿರುವ ಅನುದಾನ ಬಳಸಿ, ಕೊರತೆ ಕಂಡುಬಂದಲ್ಲಿ ಪರ್ಯಾಯ ಮೂಲಗಳಿಂದ ಒದಗಿಸಲಾಗುವುದು. ಆದರೆ ಕೊರೊನಾ ಸೋಂಕಿನ ಬಗ್ಗೆ ಒಂದಿಷ್ಟೂ ನಿರ್ಲಕ್ಷ್ಯ ಆಗಬಾರದು ಎಂದು ಹೇಳಿದರು.