ಹಾಸನ:ಮಾಜಿ ಹಾಗೂ ಹಾಲಿ ಸಿಎಂ ಭೇಟಿ ಕುರಿತು ನನಗೇನು ಗೊತ್ತಿಲ್ಲ. 119 ಶಾಸಕರನ್ನು ಹೊಂದಿರುವ ನಮ್ಮ ಸರ್ಕಾರ ಸುಭದ್ರವಾಗಿದ್ದು, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹುಟ್ಟುಹಬ್ಬದ ನಿಮಿತ್ತ ಕೇಕ್ ಕತ್ತರಿಸಿದ ಬಿ.ಸಿ.ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2019ರ ನವೆಂಬರ್ನಲ್ಲಿ ಹಾಸನಾಂಬೆ ಜಾತ್ರೆಗೆ ಬಂದಾಗ ಉಪ ಚುನಾವಣೆಯಲ್ಲಿ ಗೆಲ್ಲಿಸುವಂತೆ ಪ್ರಾರ್ಥಿಸಿದ್ದೆ. ಅದರಂತೆ ಈಗ ಕೃಷಿ ಸಚಿವನಾಗಿ ತಾಯಿಯ ದರ್ಶನ ಪಡೆದಿದ್ದೇನೆ. ಅಭಿವೃದ್ಧಿ ವಿಚಾರವಾಗಿ ನಾಯಕರಿಬ್ಬರು ಮಾತುಕತೆ ನಡೆಸಿರಬಹುದು ಎಂದು ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಪರಸ್ಪರ ಭೇಟಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಹಿ ತಿನ್ನಿಸುತ್ತಿರುವ ಅಭಿಮಾನಿಗಳು ವಿಧಾನ ಪರಿಷತ್ ಹಾಗೂ ಉಪ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದೆ. ರಾಜ್ಯ ಹಾಗೂ ಕೇಂದ್ರದ ಆಡಳಿತವನ್ನು ಜನರು ಒಪ್ಪಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡೋಣ ಎಂದರು.
ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಹಣ ಹಂಚಿದೆ ಎಂದು ಆರೋಪಿಸಿರುವ ಜೆಡಿಎಸ್ ನಾಯಕರು ಅದನ್ನು ಸಾಕ್ಷಿ ಸಮೇತ ಸಾಬೀತುಪಡಿಸಬೇಕು ಎಂದು ಸವಾಲೆಸೆದರು. ಕಳೆದ ವರ್ಷ ಶಾಸಕನಾಗಿರದೆ ದೇವಿ ದರ್ಶನಕ್ಕೆ ಬಂದಿದ್ದ ನಾನು ಈ ಬಾರಿ ಸಚಿವನಾಗಿ ಬಂದಿದ್ದೇನೆ. ಹಾಸನಾಂಬೆ ನನ್ನ ಪ್ರಾರ್ಥನೆಯನ್ನು ಈಡೇರಿಸಿದ್ದಾಳೆ ಎಂದು ಹೇಳಿದರು.
ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು. ದೀಪಾವಳಿಯ ದೀಪದ ಈ ಬೆಳಕು ಎಲ್ಲರ ಜೀವನದಲ್ಲಿ ಒಂದು ಹೊಸ ಬೆಳಕಾಗಿ ಬರಲಿ. ಶಾಂತಿ ಸಂಮೃದ್ಧಿ ಲಭಿಸಲಿ ಹಾಗೂ ವಿಶ್ವಕ್ಕೆ ಬಂದ ಕೊರೊನಾ ತೊಲಗಿ ಆದಷ್ಟು ಬೇಗ ಸಹಜ ಸ್ಥಿತಿಯತ್ತ ಬರಲಿ ಎಂದು ಹಾಸನಾಂಬೆ ಆಶೀರ್ವಾದ ಮಾಡಲಿ ಎಂದು ಬೇಡಿಕೊಳ್ಳುವುದಾಗಿ ಹೇಳಿದರು. ಇದೇ ವೇಳೆ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಸಚಿವರಿಂದ ಕೇಕ್ ಕತ್ತರಿಸಿದರು.