ಹಾಸನ:ಬ್ಯಾಂಕ್ ಸಿಬ್ಬಂದಿ ವೇತನ ವೃದ್ಧಿ ಹಾಗೂ ಇತರೆ ಸೌಲಭ್ಯಗಳ ಸುಧಾರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರದ ಹಿನ್ನೆಲೆ ನಗರದಲ್ಲೂ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಎನ್.ಆರ್. ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಬ್ಯಾಂಕ್ ನೌಕರರು ಬ್ಯಾಂಕ್ ಸಿಬ್ಬಂದಿಯ ನಾನಾ ಬೇಡಿಕೆಗಳ ಬಗ್ಗೆ ಭಾರತೀಯ ಬ್ಯಾಂಕ್ ಸಂಘಟನೆಯು ಸಕರಾತ್ಮಕವಾಗಿ ಸ್ಪಂದಿಸದೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಮ್ಮ ವೇದಿಕೆಯು ಎರಡು ದಿನಗಳ ಕಾಲ ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದೆ. ಬೇಡಿಕೆ ಈಡೇರದೇ ಇದ್ದಲ್ಲಿ, ಮಾರ್ಚ್ 11 ರಿಂದ ಮೂರು ದಿನಗಳ ಕಾಲ ಬ್ಯಾಂಕ್ ಮುಷ್ಕರ, ನಂತರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದಾಗಿ ಹೇಳಿದರು.
ನಿರಂತರ ಬೆಲೆ ಏರಿಕೆ, ಬ್ಯಾಂಕ್ ಸಿಬ್ಬಂದಿ ಮೇಲೆ ಹೆಚ್ಚುತ್ತಿರುವ ಕಾರ್ಯಭಾರ ಹಾಗೂ ಎದುರಿಸುತ್ತಿರುವ ನಾನಾ ವೃತ್ತಿ ಸಂಬಂಧಿ ಜವಾಬ್ಧಾರಿಗಳ ಹಿನ್ನೆಲೆ ಬ್ಯಾಂಕ್ ಸಿಬ್ಬಂದಿಯ ನ್ಯಾಯಬದ್ಧ ಯೋಗ್ಯತೆಗೆ ತಕ್ಕ ವೇತನ ಹೆಚ್ಚಳ ಹಾಗೂ ವೃತ್ತಿ ಸೌಲಭ್ಯಗಳಲ್ಲಿ ಸುಧಾರಣೆಯನ್ನು ಮಾಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದರು.