ಹಾಸನ:ರಾಜ್ಯ ಸರ್ಕಾರ ಕೊರೊನಾದಿಂದ ಜನರ ಶವಗಳ ಮೇಲೆ ಹಣ ಮಾಡಲು ಹೊರಟಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್-19 ವಸ್ತುಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದು, ಕೊನೆಗೆ ಸತ್ತವರ ಶವಗಳನ್ನು ಬಿಡದೆ ಅದರ ಮೇಲೆಯೂ ಕೂಡ ಹಣ ಮಾಡಲು ಹೊರಟಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ನರಕಯಾತನೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಸೋಂಕಿತರು ಆಸ್ಪತ್ರೆಯ ಚಿಕಿತ್ಸೆ ಸಾಕಪ್ಪ ಎಂದು ದೇವರ ಹತ್ತಿರ ಬೇಡಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯಸರ್ಕಾರ ಕೊರೊನಾದಿಂದ ಸತ್ತವರ ಶವಗಳ ಮೇಲೆ ಹಣ ಮಾಡಲು ಹೊರಟಿದೆ: ಸಂಸದ ಡಿ.ಕೆ.ಸುರೇಶ್ ಅಲ್ಲದೆ, ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್ ಸೇರಿದಂತೆ ಲಾಕ್ಡೌನ್ ಸಂದರ್ಭದಲ್ಲಿ 75 ಲಕ್ಷ ಆಹಾರದ ಕಿಟ್ ನೀಡಿದ್ದೇವೆ ಎಂದು ಹೇಳುತ್ತಿರುವ ಸರ್ಕಾರ, ನಮಗೆ ಲೆಕ್ಕ ಕೊಡುವುದು ಬೇಡ. ಬದಲಿಗೆ ರಾಜ್ಯದ ಆರು ಕೋಟಿ ಜನರ ಮುಂದೆ ಬಿಳಿ ಹಾಳೆಯಲ್ಲಿ ಬರೆದು ಕೊಡಲಿ. ಖರೀದಿಯಲ್ಲಿ ಸಚಿವರ ನಡುವೆ ಒಮ್ಮತವಿಲ್ಲದ ಭ್ರಷ್ಟಾಚಾರ ಕಾಣುತ್ತಿದೆ. ವೈದ್ಯಕೀಯ ಸಚಿವ, ಆರೋಗ್ಯ ಸಚಿವ ಮತ್ತು ಸಮಾಜಕಲ್ಯಾಣ ಇಲಾಖೆ ಸಚಿವರು ವಿವಿಧ ರೀತಿಯಲ್ಲಿ ಖರೀದಿಯ ಬಗ್ಗೆ ಹೇಳಿಕೆ ಕೊಡುತ್ತಿರುವುದನ್ನು ನೋಡಿದರೆ, ಸ್ಪಷ್ಟವಾಗಿ ಭ್ರಷ್ಟಾಚಾರ ನಡೆದಿರುವುದು ಕಂಡುಬರುತ್ತದೆ ಎಂದು ದೂರಿದರು.
ಹಾಸನ ಜಿಲ್ಲೆಗೆ ಯಾವ ಸಚಿವರು ಬರುತ್ತಿಲ್ಲ. ಹಸಿರು ಶಾಲು ಹಾಕಿ ಪ್ರಮಾಣವಚನ ಮಾಡಿ, ರೈತರಿಗೆ ವಂಚನೆ ಮಾಡಿದ್ದಾರೆ. ಈ ಸಂದರ್ಭದಲ್ಲೂ ಕೂಡ ನಿಗಮ-ಮಂಡಳಿ ಅಧ್ಯಕ್ಷಗಿರಿಯ ಸ್ಥಾನ ಹಂಚಿಕೆ ಬೇಕಿತ್ತಾ ಎಂದು ನಾವು ಪ್ರಶ್ನಿಸಿದರೆ, ಅದನ್ನು ರಾಜಕೀಯ ಎನ್ನುತ್ತಾರೆ ಎಂದರು.