ಹಾಸನ: ಹಿಜಾಬ್ ಹೆಸರಿನಲ್ಲಿ ಧರ್ಮದ ಗೊಂದಲ ಮೂಡಿಸಿ ಶಿಕ್ಷಣ ವ್ಯವಸ್ಥೆ ಕುಲಷಿತಗೊಳಿಸುವ ಕೋಮುವಾದಿ ಪ್ರಯತ್ನಕ್ಕೆ ರಾಜ್ಯ ಹೈಕೋರ್ಟ್ ಚಾಟಿ ಬೀಸಿ ಸರ್ಕಾರದ ನೀತಿ ಎತ್ತಿ ಹಿಡಿದಿದೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಹಾಸನದಲ್ಲಿ ಮಾತನಾಡಿದ ಅವರು, ಈ ನೆಲದ ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಉತ್ತಮ ನಿರ್ಧಾರ ಪ್ರಕಟಿಸಿದ್ದು, ಹೈಕೋರ್ಟ್ ತೀರ್ಪನ್ನು ನಾವೆಲ್ಲರೂ ಸ್ವಾಗತಿಸಬೇಕು. ಹಿಜಾಬ್ ವಿಚಾರ ಇಟ್ಟುಕೊಂಡು ರಾಜ್ಯದ ಶಿಕ್ಷಣ ಕ್ಷೇತ್ರದ ವಾತಾವರಣವನ್ನು ಕಲುಷಿತಗೊಳಿಸುವಂತಹ ಪ್ರಯತ್ನ ನಡೆಯುತ್ತಿತ್ತು.
ಹಾಸನದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಬೇಕೆಂಬ ಹುನ್ನಾರ ಕೆಲವು ದುಷ್ಟ ಶಕ್ತಿಗಳ ಗುರಿಯಾಗಿತ್ತು. ಆದರೆ, ಇವರೆಲ್ಲರಿಗೂ ಚಾಟಿ ಬೀಸುವ ರೀತಿ ಹೈಕೋರ್ಟ್ ತಮ್ಮ ತೀರ್ಪು ಪ್ರಕಟಿಸಿದೆ. ಮುಂದಾದರೂ ಇದನ್ನು ಅರ್ಥ ಮಾಡಿಕೊಂಡು ಈ ರೀತಿಯ ದುಸ್ಸಾಹಸಕ್ಕೆ ಕೈಹಾಕುವುದನ್ನು ಬಿಡಬೇಕು ಎಂದರು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೆಲವರು ಸುಪ್ರೀಂಕೋರ್ಟ್ ಮೊರೆ ಹೋಗಲು ಸ್ವತಂತ್ರರು. ಅದನ್ನ ನಾನು ತಪ್ಪು ಎಂದು ಹೇಳುವುದಿಲ್ಲ. ಆದರೆ, ತ್ರಿಸದಸ್ಯ ಪೀಠ ತೀರ್ಪು ಕೊಟ್ಟಿದೆ. ಬಹಳ ಸುದೀರ್ಘವಾಗಿ ಎಲ್ಲ ನ್ಯಾಯವಾದಿಗಳ ವಾದವನ್ನು ಕೇಳಿಕೊಂಡು ಸ್ಪಷ್ಟವಾದ ತೀರ್ಮಾನವನ್ನು ಕೊಟ್ಟಿದೆ. ಇವರು ಸುಪ್ರೀಂಕೋರ್ಟ್ಗೆ ಹೋದ್ರೆ ಅಲ್ಲೂ ಕೂಡ ಜಯ ಸಿಗುತ್ತದೆ ಎನ್ನುವ ವಿಶ್ವಾಸ ನಮಗಿದೆ ಎಂದರು.
ಪಂಚ ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶದಿಂದ ಕಾಂಗ್ರೆಸ್ ಪಕ್ಷ ಹತಾಶವಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಮುಂದಿನ 2023ರ ಚುನಾವಣೆಯನ್ನು ಬಿಜೆಪಿ ಪಕ್ಷ ಎದುರಿಸುತ್ತದೆ. ಈಗಾಗಲೇ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದು, ಯಾರ ಜೊತೆಗೂ ಮೈತ್ರಿ ಇಲ್ಲ ಅಂದಿದ್ದಾರೆ.
ರಾಜ್ಯ ಬಿಜೆಪಿ ಉಪಾಧ್ಯಕ್ಷನಾಗಿ ಕೆಲಸ ಮಾಡಿದರ ಬಗ್ಗೆ ನನಗೆ ಸಂತೃಪ್ತಿ ಇದೆ. ಕ್ಯಾಬಿನೆಟ್ ವಿಸ್ತರಣೆ ಹಾಗೂ ಪುನರ್ ರಚನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು ಹೈಕಮಾಂಡ್ ಜೊತೆ ಸೇರಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿ.ಟಿ. ರವಿ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಸಂಪುಟ ಪುನಾರಚನೆಯ ವಿಚಾರದಲ್ಲಿ ಅವರ ಮಾತನ್ನು ಪರಿಗಣಿಸಬೇಕು ಎಂದರು.
ಇದನ್ನೂ ಓದಿ:ಉಕ್ರೇನ್ ಮೇಲೆ ಮತ್ತಷ್ಟು ದಾಳಿ: ಮರಿಯುಪೋಲ್‌ನಲ್ಲಿ ದೊಡ್ಡ ಆಸ್ಪತ್ರೆ ವಶಕ್ಕೆ ಪಡೆದ ರಷ್ಯಾ ಸೇನೆ