ಅರಕಲಗೂಡು: ಮಾನವ ತನ್ನ ದುರಾಸೆಗಾಗಿ ಕಾಡು ನಾಶ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಅನೇಕ ರೀತಿಯ ದುಷ್ಪರಿಣಾಮಗಳನ್ನು ನಾವು ಎದುರಿಸಬೇಕಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಕಲಗೂಡು ತಾಲೂಕು ಕೃಷಿ ಅಧಿಕಾರಿ ಶಶಿಧರ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕೊಣನೂರು ಸಮೀಪದ ಕೆರೆಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರ್ಷದಿಂದ ವರ್ಷಕ್ಕೆ ಪರಿಸರ ನಾಶ ಹೆಚ್ಚಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ತೀವ್ರವಾದ ಪ್ರಾಕೃತಿಕ ಅಸಮತೋಲನ ಎದುರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಿ, ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.