ಕರ್ನಾಟಕ

karnataka

ETV Bharat / state

ಹೆಚ್​ ಡಿ ರೇವಣ್ಣ ಆಪ್ತನ ಮೇಲೆ ದುಷ್ಕರ್ಮಿಗಳ ದಾಳಿ: ಕೂದಲೆಳೆ ಅಂತರದಲ್ಲಿ ಪಾರು - Hassan crime news

ಮಾಜಿ ಸಚಿವ ರೇವಣ್ಣನ ಆಪ್ತ ಸಹಾಯಕರಲ್ಲಿ ಒಬ್ಬರಾಗಿರುವ ಚನ್ನರಾಯಪಟ್ಟಣದ ಉದ್ಯಮಿ ಮತ್ತು ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವತ್ಥ ಮೇಲೆ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ದುಷ್ಕರ್ಮಿಗಳಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ.

ashwatha
ಹೆಚ್​ ಡಿ ರೇವಣ್ಣ ಆಪ್ತ ಅಶ್ವತ್ಥ

By ETV Bharat Karnataka Team

Published : Oct 11, 2023, 6:46 AM IST

Updated : Oct 11, 2023, 12:58 PM IST

ಅಶ್ವತ್ಥ ಮೇಲಿನ ದಾಳಿ ಕುರಿತು ಮಾಹಿತಿ ನೀಡಿದ ಹಾಸನ ಎಸ್‌ಪಿ ಮೊಹಮ್ಮದ್ ಸುಜೀತಾ

ಹಾಸನ :ರೇವಣ್ಣನ ಆಪ್ತರಾದ ಅಶ್ವತ್ಥ ಎಂಬುವರ ಮೇಲೆ ಕೆಲ ದುಷ್ಕರ್ಮಿಗಳು ದಾಳಿ ನಡೆಸಲು ಮುಂದಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸಿಪುರದಲ್ಲಿ ನಡೆದಿದೆ.

ಎಂದಿನಂತೆ ನಿನ್ನೆ ಅಶ್ವತ್ಥ ರೇವಣ್ಣನ ಮನೆಗೆ ಭೇಟಿ ಕೊಟ್ಟು ಕೆಲ ಹೊತ್ತು ಅವರೊಂದಿಗೆ ರಾಜಕೀಯ ವಿಚಾರಗಳನ್ನ ಚರ್ಚೆ ಮಾಡಿ, ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಯಿಂದ ತಮ್ಮ ಫಾರ್ಚುನರ್ ವಾಹನದಲ್ಲಿ ಚನ್ನರಾಯಪಟ್ಟಣಕ್ಕೆ ಹೊರಟಿದ್ದಾರೆ. ರೇವಣ್ಣನ ಮನೆಯಿಂದ ಹೊರಟು ಕೇವಲ ಎರಡು ಮೂರು ನಿಮಿಷದಲ್ಲಿ ದುಷ್ಕರ್ಮಿಗಳು ಇವರನ್ನು ಹಿಂಬಾಲಿಸಿ ಅಟ್ಯಾಕ್ ಮಾಡಿದ್ದಾರೆ. ಹೊಳೆನರಸೀಪುರದ ಹೊರವಲಯದಲ್ಲಿರುವ ಅಂದರೆ ಹೊಳೆನರಸೀಪುರ - ಚನ್ನರಾಯಪಟ್ಟಣ ರಸ್ತೆಯ ಸೂರನಹಳ್ಳಿ ಗೇಟ್ ಬಳಿ ಅಪರಿಚಿತ ವಾಹನದಲ್ಲಿ ಬಂದ ನಾಲ್ಕೈದು ದುಷ್ಕರ್ಮಿಗಳು, ಅಶ್ವತ್ಥ ಬರುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಹಲ್ಲೆ ಮಾಡಲು ಮುಂದಾಗಿದ್ದಾರೆ.

ನಂತರ ಕಾರಿನಿಂದ ಇಳಿಯದ ಅಶ್ವತ್ಥ ಅವರ ಮೇಲಿನ ಸಿಟ್ಟಿನಿಂದ ಕಾರಿನ ಗಾಜನ್ನು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅಶ್ವತ್ಥ, ಏಕಾಏಕಿ ಗಾಡಿಯನ್ನು ತಿರುಗಿಸಿಕೊಂಡು ಜೋರಾಗಿ ವಾಹನ ಚಲಾಯಿಸಿ ಮುಂದೆ ಸಾಗಿದ್ದಾರೆ. ಇನ್ನು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಚನ್ನರಾಯಪಟ್ಟಣದ ತಮ್ಮ ನಿವಾಸಕ್ಕೆ ಬರುತ್ತಿದ್ದ ವೇಳೆಯೂ ಮತ್ತೆ ಅವರನ್ನು ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿದ್ದಾರೆ. ಆದರೆ, ತಕ್ಷಣ ಅಶ್ವತ್ಥ ಅವರು ಪೊಲೀಸ್ ಠಾಣೆಗೆ ಮತ್ತು ರೇವಣ್ಣನವರಿಗೆ ಮಾಹಿತಿ ತಿಳಿಸಿದ್ದರಿಂದ ರಸ್ತೆ ಮಾರ್ಗದಲ್ಲಿ ಪೊಲೀಸರು ಬಂದಿದ್ದು, ಅವರನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಹಾಸನದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದೆ, ಅದರಲ್ಲೂ ಮಾಜಿ ಸಚಿವ ಹೆಚ್ ಡಿ ರೇವಣ್ಣನವರ ಆಪ್ತರ ಮೇಲೆ ದಾಳಿಗಳು ನಡೆಯುತ್ತಿದ್ದು, ಎರಡು ವರ್ಷದ ಹಿಂದೆ ಹಾಸನ ನಗರಸಭೆಯ ಸದಸ್ಯ ಪ್ರಶಾಂತ್ ನಾಗರಾಜು ಹಾಗೂ ಎರಡು ತಿಂಗಳ ಹಿಂದೆ ಗ್ರಾನೈಟ್ ಉದ್ಯಮಿ ಕೃಷ್ಣೇಗೌಡ ಎಂಬುವರ ಬರ್ಬರ ಕೊಲೆಯಾಗಿತ್ತು. ವಿಶೇಷ ಅಂದರೆ, ಇವರಿಬ್ಬರೂ ಕೂಡ ರೇವಣ್ಣನಿಗೆ ಬಹಳ ಆತ್ಮೀಯರು ಮತ್ತು ಆಪ್ತರಾಗಿದ್ದರು. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಪೊಲೀಸರು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವುದಾಗಿ ತಿಳಿಸಿದ್ದಾರೆ.

ಸ್ಥಳಕ್ಕೆ ರೇವಣ್ಣ ಭೇಟಿ : ಘಟನೆ ನಡೆದ ಬೆನ್ನಲ್ಲೇ ಮಾಜಿ ಸಚಿವ ಹೆಚ್ ಡಿ ರೇವಣ್ಣ ಚನ್ನರಾಯಪಟ್ಟಣಕ್ಕೆ ಆಗಮಿಸಿದ್ದು, ಅಶ್ವತ್ಥ ಅವರ ಬಳಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಹಾಸನ ಎಸ್‌ಪಿ ಮೊಹಮ್ಮದ್ ಸುಜೀತಾ ಭೇಟಿ ನೀಡಿ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಸದ್ಯಕ್ಕೆ ಅವರಿಗೆ ಪೊಲೀಸ್ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಸ್ ಪಿ, ನಾಲ್ಕು ಜನ ದುಷ್ಕರ್ಮಿಗಳು ಅಶ್ವತ್ಥ ಮೇಲೆ ದಾಳಿ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಈಗಾಗಲೇ ದುಷ್ಕರ್ಮಿಗಳ ಮೇಲೆ ದೂರನ್ನು ಸಹ ಪಡೆದು ಶೋಧ ಕಾರ್ಯವನ್ನು ನಡೆಸುತ್ತಿದ್ದೇವೆ. ಯಾರು ಎಂಬುದು ಸ್ವಲ್ಪ ಮಾಹಿತಿ ಸಿಕ್ಕಿದೆ, ಪ್ರಕರಣದ ತನಿಖಾ ದೃಷ್ಟಿಯಿಂದ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಕೂಡಲೇ ಅವರನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ :ಹಮಾಸ್‌ ಉಗ್ರರ ವಿರುದ್ಧದ ಸಮರಕ್ಕೆ 3 ಲಕ್ಷ ಇಸ್ರೇಲ್ ಸೈನಿಕರು ಸಜ್ಜು; ಗಾಜಾ ಮೇಲೆ ನಿರಂತರ ದಾಳಿ

Last Updated : Oct 11, 2023, 12:58 PM IST

ABOUT THE AUTHOR

...view details