ಹೊಳೆನರಸೀಪುರ(ಹಾಸನ): ಇವರ ಸ್ವಾರ್ಥಕ್ಕಾಗಿ ನನ್ನನ್ನು ಬಲಿ ಕೊಡೋಕ್ಕೆ ಹೊರಟಿಲ್ಲ. ನಮ್ಮ ಜನರನ್ನು ಮತ್ತು ನಮ್ಮ ರೈತರನ್ನು ಬಲಿ ಕೊಡೋಕೆ ಇವರು(ಹೆಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ) ಹೊರಟಿದ್ದಾರೆ. ನಾನು ಕೆಟ್ಟವನು, ಅವರಿಗೆ ಟಿಕೆಟ್ ಕೊಡಬೇಡಿ ಎಂದು ಜನರಿಂದ ಹೇಳಿಸಿದ್ದರು. ಆದರೆ ನಾನು ಅವರ ಹಾಗೆ ಮೈಕ್ ಹಾಕಿಕೊಂಡು ಮನೆ ಮುಂದೆ ಗಲಾಟೆ ಮಾಡಕ್ಕಾಗುತ್ತಾ ಎನ್ನುವ ಮೂಲಕ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ಅವರ ಪುತ್ರರ ವಿರುದ್ಧ ಶಾಸಕ ಎ ಟಿ ರಾಮಸ್ವಾಮಿ ಕಿಡಿಕಾರಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರದ ಹೊಳೆನರಸೀಪುರ ತಾಲೂಕಿನ ಮೈಸೂರು ಗ್ರಾಮದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ರೇವಣ್ಣ ಕುಟುಂಬದ ವಿರುದ್ಧ ಆಕ್ರೋಶ ಹಾಕಿದ ಅವರು, ಇಡೀ ರಾಜ್ಯಕ್ಕೆ ಎ ಟಿ ರಾಮಸ್ವಾಮಿ ಎಂತಹ ಮನುಷ್ಯ ಎಂಬುದು ಗೊತ್ತಿದೆ. ಅವತ್ತು ನಾನು ಇಡೀ ರಾತ್ರಿ ನಿದ್ದೆ ಮಾಡಿಲ್ಲ, ನನ್ನ ಕಾರ್ಯಕ್ರಮಕ್ಕೆ ದೇವೇಗೌಡರ ಟೂರ್ ಪ್ಲಾನ್ ರೆಡಿ ಆಗಿತ್ತು. ಆದರೆ ಬೆಳಗ್ಗೆ ಕಾರ್ಯಕ್ರಮವೇ ರದ್ದಾಗಿದೆ ಅಂತ ಹೇಳಿ ಮೆಸೇಜ್ ಹಾಕ್ತಾರೆ. ಅಂದರೆ ಅಂತಹ ದೇವೇಗೌಡರನ್ನೇ ಉತ್ಸವ ಮೂರ್ತಿಯಾಗಿ ಮಾಡಿರೋ ಅವರು ನನ್ನನ್ನ ಬಿಡ್ತಾರಾ? ನನ್ನ ಕಾರ್ಯಕ್ರಮಕ್ಕೆ ಹೋಗಬಾರದು ಅಂತ ಅವರ ಕುಟುಂಬದವರೇ ತಡೆದಿದ್ದರು ಎಂದು ಆರೋಪಿಸಿದರು.
ಅನ್ಯಾಯ ಆಗುವುದಕ್ಕೆ ಬಿಡಲ್ಲ ಅಂದಿದ್ದರು:ಜ.22ರಂದು ಕಾರ್ಯಕ್ರಮ ಆಯೋಜನೆ ಮಾಡಿದ್ದೆವು, ಕಾರ್ಯಕ್ರಮಕ್ಕೆ ಹೆಚ್ ಡಿ ದೇವೇಗೌಡರನ್ನು ಆಹ್ವಾನ ಮಾಡಲು ಬೆಂಗಳೂರಿಗೆ ಹೋಗಿದ್ದೆ. ನಂತರ ಅವರಿಗೆ ಮೊದಲು ಆರೋಗ್ಯ ಕಾಪಾಡಿಕೊಳ್ಳಿ. ಕಾರ್ಯಕ್ರಮ ಇನ್ನೊಂದು ದಿನ ಮಾಡೋಣ ಅಂತ ಹೇಳಿದೆ. ಆದರೆ ಅವರು ರಾಜಕೀಯ ಮಾತಾಡೋಕೆ ಶುರು ಮಾಡಿದ್ದರು. ನನ್ನ ಕೈ ಹಿಡ್ಕೊಂಡು ನಿನಗೆ ಏನು ಕಿರುಕುಳ ಕೊಡುತ್ತಿದ್ದಾರೆ, ಏನು ಅನ್ಯಾಯ ಆಗ್ತಿದೆ ನನಗೆ ಗೊತ್ತು. ನಾನು ಬದುಕಿರೋ ತನಕ ಅನ್ಯಾಯ ಆಗುವುದಕ್ಕೆ ಬಿಡಲ್ಲ ಅಂದಿದ್ದರು ಎಂದರು.