ಹಾಸನ:ಕೊರೊನಾ ಹೆಚ್ಚಾಗುತ್ತಿದ್ದರೂ ವಾಹನದಲ್ಲಿ ಕೂಲಿ ಕಾರ್ಮಿಕರನ್ನು ಕುರಿಮಂದೆಯಂತೆ ತುಂಬಿಕೊಂಡು ಬಂದಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಹಾಡ್ಯಾ ಗ್ರಾಮದ ದೇವಿ ಎಸ್ಟೇಟ್ ಮಾಲೀಕ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ತನ್ನ ಕಾಫಿ ತೋಟದ ಕೆಲಸಕ್ಕೆಂದು ಅಸ್ಸಾಂನಿಂದ 50ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರು ಆಗಮಿಸಿದ್ದರು. ಆದರೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸದೆ ರೈಲು ನಿಲ್ದಾಣದಿಂದ ವಾಹನವೊಂದರಲ್ಲಿ ಕುರಿಗಳನ್ನು ತುಂಬುವ ಹಾಗೆ ತುಂಬಿಕೊಂಡು ಕಾಫಿ ಎಸ್ಟೇಟ್ಗೆ ಕರೆತಂದಿದ್ದಾರೆ.
ಕೊರೊನಾದಿಂದ ಈಗಾಗಲೇ ಹಾಸನ ಸೇರಿದಂತೆ ಸಕಲೇಶಪುರದಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾಲೀಕರ ನಿರ್ಲಕ್ಷ್ಯಕ್ಕೆ ಸ್ಥಳೀಯರು ಗರಂ ಆಗಿದ್ದಾರೆ.
ಇನ್ನು ವಿಚಾರ ತಿಳಿದ ತಹಶೀಲ್ದಾರ್ ಜೈಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲಾ ಕೂಲಿ ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಅಸ್ಸಾಂನಿಂದ ಬಂದ 50ಕ್ಕೂ ಹೆಚ್ಚು ಮಂದಿಯನ್ನು ಕೋವಿಡ್ ಪರೀಕ್ಷೆ ಮಾಡಿಸಲು ಸದ್ಯ ಹೋಂ ಕ್ವಾರಂಟೈನ್ ಮಾಡಿದ್ದಾರೆ.
ಇನ್ನು ಕಾಫಿ ಎಸ್ಟೇಟ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಮಾಲೀಕ ಮತ್ತು ಅಲ್ಲಿನ ಎಸ್ಟೇಟ್ ಮ್ಯಾನೇಜರ್ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಇಬ್ಬರಿಗೂ ತಾಲೂಕಾಡಳಿತ ನೋಟೀಸ್ ಜಾರಿ ಮಾಡಿದೆ.