ಕರ್ನಾಟಕ

karnataka

ETV Bharat / state

ಊಟ ಮಾಡಿದ್ದನ್ನ ಚಿತ್ರೀಕರಿಸಿದ ಬಿಜೆಪಿ ಮುಖಂಡ ಅರೆಸ್ಟ್‌.. ಹೊಳೆನರಸೀಪುರ ಐಬಿಯೊಳಗೆ ರಾತ್ರಿ ನಡೆದಿರೋದೇನು? - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಹಾಸನ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಮಾಂಸಾಹಾರಿ ಊಟ ಮಾಡ್ತಿರೋದನ್ನೇ ವಿಡಿಯೋ ಮಾಡಿ ಹೈಡ್ರಾಮಾ ಮಾಡಿದ ಬಿಜೆಪಿ ಮುಖಂಡನೊಬ್ಬ ಬಂಧಿತನಾಗಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.

ಬಿಜೆಪಿ ಮುಖಂಡ ನಾಗೇಶ್

By

Published : Oct 5, 2019, 5:47 PM IST

ಹಾಸನ:ಸಂಸದರು ನಡೆಸಿದ್ದರು ಎನ್ನಲಾದ ಸಭೆ ಬಳಿಕ ಹಾಸನ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಮಾಂಸಾಹಾರಿ ಊಟ ಮಾಡ್ತಿರೋದನ್ನೇ ವಿಡಿಯೋ ಮಾಡಿ ಹೈಡ್ರಾಮಾ ಮಾಡಿದ ಬಿಜೆಪಿ ಮುಖಂಡನೊಬ್ಬ ಬಂಧಿತನಾಗಿರುವ ಘಟನೆ ಹೊಳೆನರಸೀಪುರದಲ್ಲಿ ನಡೆದಿದೆ.

ಊಟ ಮಾಡಿದ್ದನ್ನ ಚಿತ್ರೀಕರಿಸಿದ ಬಿಜೆಪಿ ಮುಖಂಡ ಅರೆಸ್ಟ್‌..

ಬಿಜೆಪಿ ಮುಖಂಡ ನಾಗೇಶ್ ಬಂಧಿತನಾಗಿರುವ ಆರೋಪಿ. ನಿನ್ನೆ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ತಹಶೀಲ್ದಾರ್‌ರ ಸಭೆ ನಡೆಸಿದ್ದರಂತೆ. ಸಭೆ ಬಳಿಕ ಎಲ್ಲರೂ ಊಟ ಮಾಡಿಕೊಂಡು ಹೋಗಬೇಕೆಂದು ಸ್ವತಃ ಸಂಸದರೇ ಮನವಿ ಮಾಡಿದ್ದರಂತೆ.
ಹಾಗಾಗಿ ಸಂಸದರೇ ತರಿಸಿದ್ದರು ಎನ್ನಲಾದ ಮಾಂಸಾಹಾರಿ ಊಟವನ್ನ ಜಿಲ್ಲೆಯ ಎಲ್ಲಾ ಏಳೂ ತಹಶೀಲ್ದಾರರು ಮಾಡುತ್ತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಬಿಜೆಪಿ ಮುಖಂಡ ನಾಗೇಶ್‌, ನಾಲ್ಕೈದು ಸ್ನೇಹಿತರ ಕೈಗೆ ಮೊಬೈಲ್‌ ಕೊಟ್ಟು ಚಿತ್ರೀಕರಿಸಲು ಹೇಳಿ ತಾನು ಐಬಿಯಿಂದ ಹೊರ ಬಂದಿದ್ದಾನೆ. ಅದೇ ವೇಳೆ ಅಲ್ಲೇ ಇದ್ದ ಪೊಲೀಸರ ಜತೆಗೆ ಕೂಡ ಅಸಭ್ಯವಾಗಿ ನಾಗೇಶ್‌ ವರ್ತಿಸಿದ್ದಾನೆ. ಅಲ್ಲಿದ್ದ ತಹಶೀಲ್ದಾರರ ಆದೇಶದ ಮೇರೆಗೆ ಪೊಲೀಸರು ಆರೋಪಿ ನಾಗೇಶ್‌ನನ್ನ ಬಂಧಿಸಿದಾರೆ.

ಅಷ್ಟೇ ಅಲ್ಲ, ಸರ್ಕಾರಿ ಕಟ್ಟಡದಲ್ಲಿ ಊಟ ಮಾಡುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಆ ದೃಶ್ಯ ಚಿತ್ರೀಕರಿಸಿ ತಾವುಗಳು ಮಾಂಸ-ಮದ್ಯ ಸೇವಿಸುತ್ತಿದ್ದೇವೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಆ ವಿಡಿಯೋ ಹರಿಯಬಿಟ್ಟಿದಾನೆ ಅಂತಾ ತಹಶೀಲ್ದಾರರು ಆರೋಪಿಸಿದಾರೆ. ನಿನ್ನೆ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ. ಹೊಳೆನರಸೀಪುರ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇಘನಾ, ಚನ್ನರಾಯಪಟ್ಟಣ ತಹಶೀಲ್ದಾರ್ ಮಾರುತಿ ಸೇರಿ ಒಟ್ಟು ಏಳು ತಹಶೀಲ್ದಾರ್​ಗಳು ಸೇರಿ ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆಂಬ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಎಲ್ಲ ಘಟನೆಗೆ ಸಂಬಂಧಿಸಿ ಹೊಳೆಸರಸೀಪುರದ ತಹಶೀಲ್ದಾರ್‌ ಶ್ರೀನಿವಾಸ್ ಅವರು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲಿಸಿದಾರೆ. ಅಕ್ಟೋಬರ್ 4 ರ ರಾತ್ರಿ 10.30ರ ಸುಮಾರಿಗೆ ಹೊಳೆನರಸೀಪುರ ಐಬಿಯಲ್ಲಿ ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ನಾಲ್ಕೈದು ಜನರ ಗುಂಪು ಮೊಬೈಲ್​ನಲ್ಲಿ ವಿಡಿಯೋ ಮಾಡಲು ಆರಂಭಿಸಿತ್ತು. ನಾವು ಕೇಳಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದರು ಎಂದು ದೂರಿದಾರೆ. ಸದ್ಯ ಬಂಧಿತನಾಗಿದ್ದ ಆರೋಪಿ ನಾಗೇಶ್​ಗೆ ಠಾಣೆಯಲ್ಲಿಯೇ ಬೇಲ್ ದೊರೆತಿದೆ. ಈ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮತ್ತಷ್ಟು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details