ಹಾಸನ: ಮೊದಲೇ ನಾನು ಬಾಂಬೆ ಮಂದಿಯನ್ನು ನಮ್ಮ ರಾಜ್ಯಕ್ಕೆ ಕರೆಸಿಕೊಳ್ಳುವುದು ಬೇಡ ಅಂದೆ. "ಅದೇನೋ ಅಂತಾರಲ್ಲ ಎಲ್ಲೋ ಇದ್ದು ಮಾರಿನ ಮನೆಗೆ ಕರೆಸಿಕೊಂಡಗಾಯ್ತು ಅಂತ"; ಹಂಗಾಯಿತು ನಮ್ಮ ಪಾಡು ಎಂದು ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಂಬೆ ಮಂದಿಯನ್ನು ರಾಜ್ಯಕ್ಕೆ ಕರೆಸಿಕೊಳ್ಳುವುದು ಬೇಡ ಅಂದೆ ಕೇಳಲಿಲ್ಲ:ಶಾಸಕ ಶಿವಲಿಂಗೇಗೌಡ
ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಮುಂದೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿರುವವರ ವಿರುದ್ಧ ಕೆಂಡಾಮಂಡಲವಾದರು.
ಜಿಲ್ಲಾ ಪಂಚಾಯತಿಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೊರೊನಾ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಟ್ರೈನ್ ಹತ್ತಿಕೊಂಡು ಕರ್ನಾಟಕಕ್ಕೆ ಬರಬೇಕಾದ್ರೆ ಮೈತುಂಬಾ ರೋಗ ಅಂಟಿಸಿಕೊಂಡು ಬಂದರು. 45 ದಿನ ಜಿಲ್ಲೆ ಬಹಳ ಚೆನ್ನಾಗಿತ್ತು, ಜಿಲ್ಲಾಡಳಿತ ಶ್ರಮವಹಿಸಿ ಹಸಿರು ವಲಯವನ್ನಾಗಿ ಉಳಿಸಿಕೊಂಡಿತ್ತು. ಆದರೆ ಲಾಕ್ಡೌನ್ ಸಡಿಲಿಕೆಯಿಂದ ಮುಂಬೈನಿಂದ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿ ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಇನ್ನೂ ಬಾಂಬೆಯಿಂದ ಬರುವವರೆಲ್ಲ ನಮ್ಮ ಅರಸೀಕೆರೆ ಮೂಲಕ ಬರಬೇಕು.
ಅರಸೀಕೆರೆ ರೈಲು ನಿಲ್ದಾಣದಲ್ಲಿ ಇಳಿದು ನಂತರ ಬೇರೆ ವಾಹನದಲ್ಲಿ ತೆರಳಬೇಕು. ನಮ್ಮ ತಾಲೂಕಿಗೂ ಕೊರೊನಾ ಬರುವ ಭಯ ಶುರುವಾಗಿದೆ. ಹೊರ ರಾಜ್ಯದಿಂದ ಬರುವವರನ್ನು ಪರೀಕ್ಷೆ ಮಾಡದೆ ಕರೆಸಿಕೊಳ್ಳುತ್ತಿರುವ ಅಥವಾ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಿ 14 ದಿನ ತಪಾಸಣೆಗೆ ಒಳಪಡಿಸಿ ನಂತರ ಮನೆಗೆ ಕಳಿಸುತ್ತಿರೋ ಅದನ್ನು ನೀವು ಹೇಳಬೇಕು ಎಂದು ಸಚಿವದ್ವಯರಲ್ಲಿ ಕೆ.ಎಂ ಶಿವಲಿಂಗೇಗೌಡ ಆಗ್ರಹಿಸಿದರು.