ಅರಕಲಗೂಡು: ಸೂರಿಲ್ಲದವರಿಗೆ ಸೂರು ಒದಗಿಸಲಾಗುತ್ತಿದ್ದು, ಆಶ್ರಯ ನಿವೇಶನ ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದೆ.
ತಾಲೂಕಿನ ಶಿಕ್ಷರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಟಿ. ರಾಮಸ್ವಾಮಿ, ಆಶ್ರಯ ಸಮಿತಿ ವತಿಯಿಂದ ಆಶ್ರಯ ನಿವೇಶನವನ್ನು ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಒದಗಿಸುವ ಕುರಿತು ಈ ಹಿಂದೆ ಎರಡು ಬಾರಿ ಸಭೆ ಸೇರಿ ಚರ್ಚೆ ನಡೆಲಾಗಿತ್ತು. ಅರ್ಜಿಗಳನ್ನು ಸ್ವೀಕರಿಸಿ, ಎಲ್ಲವನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಸಮಿತಿಯ ಅಧ್ಯಕ್ಷರು ಅನುಮೋದಿಸಿದ ನಂತರ ಜಿಲ್ಲಾಧಿಕಾರಿಗಳಿಗೆ ಪಟ್ಟಿ ಕಳುಹಿಸಿಕೊಡಬೇಕು ಎನ್ನುವುದನ್ನು ಹಿಂದಿನ ಆಶ್ರಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:ಗಣರಾಜ್ಯೋತ್ಸವದ ನಿಮಿತ್ತ ಮಂಗಳವಾರವೂ ತೆರೆಯಲಿದೆ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಪಾರ್ಕ್
ಎಲ್ಲ ಅರ್ಜಿಗಳನ್ನು ಪರಿಶೀಲನೆ ಮಾಡಲು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಪ.ಪಂ. ಅಧ್ಯಕ್ಷರಿಗೆ ಮತ್ತು ತಾಲೂಕು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಅರಕಲಗೂಡು ಪಟ್ಟಣದಲ್ಲಿ ಪ್ರಚಾರವನ್ನು ಕೂಡ ಮಾಡಿಸಲಾಗಿದ್ದು, ವಾರ್ಡ್ವಾರು ಸಭೆ ಕರೆದು, ಸಭೆಯಲ್ಲಿ ತಾತ್ಕಾಲಿಕ ಪಟ್ಟಿಯನ್ನು ಎರಡೆರಡು ಬಾರಿ ಓದಿ ತಿಳಿಸಿ ಆ ಪಟ್ಟಿಯಲ್ಲಿ ಯಾರಾದರೂ ನಿವೇಶನ ಮತ್ತು ಮನೆ ಇರುವ ಫಲಾನುಭವಿಗಳು ಇದ್ದಲ್ಲಿ ಪಟ್ಟಣ ಪಂಚಾಯತ್ಗೆ ತಿಳಿಸಲು ತಿಳಿಸಿದ್ದೇವೆ. ಇವೆಲ್ಲವನ್ನೂ ಪರಿಶೀಲಿಸಿದ ನಂತರ ಯಾವುದೇ ಲೋಪಗಳು ಆಗಬಾರೆದೆಂಬ ದೃಷ್ಟಿಯಿಂದ ಅಂತಿಮವಾಗಿ 805 ಅರ್ಜಿಗಳು ಬಂದಿದ್ದು, 195 ಅರ್ಹ ಆಶ್ರಯ ನಿವೇಶನ ಫಲಾನುಭವಿಗಳ ಮೊದಲ ಹಂತದ ತಾತ್ಕಾಲಿಕ ಪಟ್ಟಿಯನ್ನು ಪ್ರಕಟ ಮಾಡಿ ಪಟ್ಟಣ ಪಂಚಾಯತ್ ನೋಟಿಸ್ ಬೋರ್ಡ್ಗೆ ಹಾಕಲು ಸೂಚನೆ ನೀಡಲಾಗಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಇರುವವರಲ್ಲಿ ಯಾರಾದರೂ ನಿವೇಶನ ಹೊಂದಿರುವವರು ಇದ್ದಲಿ 23/01/2021 ಶನಿವಾರದ ಒಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು.