ಅರಕಲಗೂಡು: ತಂಬಾಕು ಬೆಳೆ ಕುಸಿತಗೊಂಡ ಹಿನ್ನೆಲೆ ಕೆಳದರ್ಜೆ ಹೊಗೆಸೊಪ್ಪು ಖರೀದಿ ಮಾಡುತ್ತಿರುವುದನ್ನು ವಿರೋಧಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ರೈತರು ತಲೆಯ ಮೇಲೆ ಚಪ್ಪಡಿಕಲ್ಲು ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ರು.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ತಂಬಾಕು ಮಾರುಕಟ್ಟೆ ಆವರಣದಲ್ಲಿ ಹಾಸನ ಜಿಲ್ಲಾ ರೈತ ಸಂಘದ ವತಿಯಿಂದ ಇಂತಹ ವಿನೂತನ ಪ್ರತಿಭಟನೆ ಮಾಡಲಾಯಿತು. ಬೆಂಬಲ ಕುಸಿತ ಮತ್ತು ಕೆಳದರ್ಜೆಯ ತಂಬಾಕನ್ನು ಖರೀದಿ ಮಾಡಬೇಕು ಎಂದು ಒತ್ತಾಯಿಸಿ ರೈತರು ಚಪ್ಪಡಿ ಕಲ್ಲುಗಳನ್ನು ತಲೆಯಮೇಲೆ ಇಟ್ಟುಕೊಂಡು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ರು.
ಈ ವೇಳೆ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಸಿಬಳ್ಳಿ ಯೋಗೇಶ್, ಕೋವಿಡ್-19ರ ನೆಪವನ್ನೊಡ್ಡಿ, ಕಡಿಮೆ ದರ್ಜೆಯ ಹೊಗೆಸೊಪ್ಪನ್ನು ಖರೀದಿಸಿದೇ ಕೇವಲ ಉತ್ತಮ ದರ್ಜೆಯ ಹೊಗೆಸೊಪ್ಪನ್ನು ಮಾತ್ರ ಖರೀದಿ ಮಾಡುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ತಂಬಾಕು ಬೆಳೆದ ರೈತರಿಗೆ ಅನ್ಯಾಯ ಎಸಗಿದಂತೆ ಆಗುತ್ತದೆ. ತಂಬಾಕು ಮಂಡಳಿಯವರು ಪ್ರಾರಂಭದ ದಿನದಂದು ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ರೈತರ ಕಣ್ಣೊರೆಸಲು ಪ್ರಥಮ ದರ್ಜೆಯ ತಂಬಾಕಿಗೆ 175 ನೀಡುತ್ತೇವೆಂದು ಹೇಳಿ, ರೈತರಿಗೆ ಅನ್ಯಾಯ ಮಾಡಿದರು.