ತುಮಕೂರು/ ಹಾಸನ:ತುಮಕೂರು ಹಾಗೂ ಹಾಸನದಲ್ಲಿ ವಿವಿಧ ಬೇಡಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಹಾಸನ ಡಿಸಿ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಪ್ರತಿಭಟನೆಯ ವೇಳೆ ನನಗೆ ನ್ಯಾಯ ಸಿಗುವ ತನಕ ನಾವು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ. ಮೈಯಲ್ಲಿನ ರಕ್ತ ಕೊಟ್ಟೆವು ಆದರೆ ನಮ್ಮ ಪಟ್ಟು ಬಿಡುವುದಿಲ್ಲ ಎಂದು ಹಾಸನ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಪುಪ್ಪಾ ತಿಳಿಸಿದ್ದಾರೆ.
ತುಮಕೂರಿನಲ್ಲೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಧರಣಿ ನಡೆಸಿದ್ದಾರೆ.
ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿಗಳ ಮೂಲಕ ಶಿಕ್ಷಣ ನೀಡಲಾಗಿದೆ, ನಮಗೂ ಸಹ ಪುಸ್ತಕಗಳನ್ನು ನೀಡಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅವಕಾಶ ನೀಡಲಾಗಿದೆ. ಹಾಗಾಗಿ ಅಂಗನವಾಡಿಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಪ್ರಾರಂಭ ಮಾಡಬೇಕು ಎಂದು ತುಮಕೂರು ಜಿಲ್ಲಾ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು ಆಗ್ರಹಿಸಿದ್ದಾರೆ.