ಹಾಸನ : ಬಿಜೆಪಿ ಕಾರ್ಯಕರ್ತರಿಂದ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಆಗ್ರಹಿಸಿದ್ದಾರೆ.
ತಾಲೂಕಿನ ಹೊಸೂರು ಗ್ರಾಮದ ನಿವಾಸಿ ಹಾಗೂ ಜೆಡಿಎಸ್ ಕಾರ್ಯಕರ್ತ ಮನು ಎಂಬುವರು ಹಲ್ಲೆಗೊಳಗಾದವರು. ಇದೇ ಗ್ರಾಮದಲ್ಲಿರುವ ಬಿಜೆಪಿ ಕಾರ್ಯಕರ್ತರು ಮೂರು ಬಾರಿ ಹಲ್ಲೆ ನಡೆಸಿದರೂ ಸಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಗಾಯಾಳುವನ್ನು ನೋಡಲು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದ ಶಾಸಕ ಹೆಚ್ ಪಿ ಸ್ವರೂಪ್ ಅವರು ಪೊಲೀಸ್ ನಡೆಗೆ ಸಿಡಿಮಿಡಿಗೊಂಡು ಕೂಡಲೇ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದ್ರೆ, ಜಾಗ ಬಿಟ್ಟು ಕದಡುವುದಿಲ್ಲ ಎಂದು ಪಟ್ಟು ಹಿಡಿದರು. ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಆಗಮಿಸಿದ ಡಿವೈಎಸ್ಪಿ, ಪೊಲೀಸ್ ಅಧಿಕಾರಿಗಳ ತಂಡ ಶಾಸಕ ಹೆಚ್.ಪಿ ಸ್ವರೂಪ್ ಮನವೊಲಿಸುವಲ್ಲಿ ಯಶಸ್ವಿಯಾದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಹೆಚ್ ಪಿ ಸ್ವರೂಪ್, "ನಮ್ಮ ಪಕ್ಷದ ಕಾರ್ಯಕರ್ತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು. ನಮ್ಮ ಕಾರ್ಯಕರ್ತ ಮನು ಎಂಬುವರ ಮೇಲೆ ಮೂರನೇ ಬಾರಿ ಹಲ್ಲೆ ನಡೆದಿರುವುದು ಖಂಡನೀಯ. ಹಾಸನ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಘರ್ಷಣೆ ನಡೆದಿದ್ದರೂ ಸಬ್ ಇನ್ಸ್ಪೆಕ್ಟರ್ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡುಬಂದಿದೆ. ಮುಂದೆ ಏನಾದರೂ ದೊಡ್ಡ ಮಟ್ಟದಲ್ಲಿ ಅನಾಹುತ ಸಂಭವಿಸಿದ್ರೆ ನೇರವಾಗಿ ಪೊಲೀಸ್ ಇಲಾಖೆಯೇ ಕಾರಣವಾಗಬೇಕಾಗುತ್ತದೆ" ಎಂದರು.