ಹಾಸನ: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಆದರೆ, ಕೆಲವೆಡೆಗಳಲ್ಲಿ ಕಳಪೆ ಆಲೂಗಡ್ಡೆ ಬೀಜ ಪೂರೈಕೆಯಾಗಿದ್ದು, ಬಿತ್ತನೆ ಮಾಡಿ 15 ದಿನಗಳಾದರೂ ಇನ್ನೂ ಕೂಡ ಬೀಜ ಮೊಳಕೆಯೊಡೆಯದೆ ಮಣ್ಣಿನಲ್ಲೇ ಕೊಳೆಯುವ ಹಂತ ತಲುಪಿದೆ. ಹೀಗಾಗಿ ಆಲೂಗಡ್ಡೆ ಬಿತ್ತಿದ ರೈತರು ಚಿಂತಾಕ್ರಾಂತರಾಗಿದ್ದಾರೆ. ಬಿತ್ತನೆ ಮಾಡಿದ ಆಲೂಗಡ್ಡೆ ಈ ಬಾರಿ ಕೈಗೆ ಬರುತ್ತಾ ಅಥವಾ ಮಣ್ಣುಪಾಲಾಗುತ್ತಾ ಎಂಬ ಆತಂಕದಲ್ಲಿದ್ದಾರೆ.
ಕೃಷಿ ಚಟುವಟಿಕೆ ಪ್ರಾರಂಭಿಸಿದ ಹಾಸನದ ರೈತರು ಈ ನಡುವೆ ಇನ್ನು ಕೆಲ ರೈತರು ಆಲೂಗೆಡ್ಡೆಯ ಬದಲು ಮೆಕ್ಕೆಜೋಳದ ಮೊರೆ ಹೋಗಿದ್ದಾರೆ. ಮೆಕ್ಕೆಜೋಳದಿಂದಲೂ ಬದುಕು ಹಸನು ಮಾಡಿಕೊಳ್ಳಬಹುದೆಂಬ ನಂಬಿಕೆಯಿಂದ ಆಲೂಗಡ್ಡೆ ಬೆಳೆಯುತ್ತಿದ್ದ ರೈತರು, ಜೋಳ ಬೆಳೆಯಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಕಳೆದ ಮೂರು ತಿಂಗಳಿನಿಂದ ಮನೆಯಲ್ಲಿ ಕೂತಿದ್ದ ರೈತರು ಮುಂದಿನ ಐದು ತಿಂಗಳಿನಲ್ಲಿ ಬದುಕು ಕಟ್ಟಿಕೊಳ್ಳುವ ತವಕದಲ್ಲಿದ್ದಾರೆ.
ಹಳೇ ಬೇಸಾಯ ಪದ್ಧತಿಗೂ ಈಗಿನ ಬೇಸಾಯ ಪದ್ಧತಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ಹಿಂದೆ ಸಗಣಿ ಮತ್ತು ಸಾವಯವ ಗೊಬ್ಬರ ಬಳಸಿ ಅಲ್ಪಸ್ವಲ್ಪ ಬೆಳೆಯನ್ನು ಬೆಳೆಯುತ್ತಿದ್ದವರು ಕಾಲ ಬದಲಾದಂತೆ ರಾಸಾಯನಿಕ ಗೊಬ್ಬರದತ್ತ ಮುಖ ಮಾಡಿದ್ದಾರೆ. ಇದರಿಂದ ಇಳುವರಿ ಚೆನ್ನಾಗಿ ಬರುತ್ತದೆ. ಜೊತೆಗೆ ರೈತನಿಗೆ ಒಂದಿಷ್ಟು ಆದಾಯವೂ ಬರುತ್ತಿದೆ. ಆದರೆ, ವಿಷಮುಕ್ತ ಫಸಲು ಮಾತ್ರ ಮಾಡಲು ಸಾಧ್ಯವಿಲ್ಲ. ಪರಿಸ್ಥಿತಿಗೆ ನಾವು ಕೂಡ ಹೊಂದಿಕೊಳ್ಳಬೇಕಿದೆ. ಹಾಗಾಗಿ, ರಾಸಾಯನಿಕ ಗೊಬ್ಬರವನ್ನು ಬಳಸಿ ಆದಾಯದ ನಿರೀಕ್ಷೆಯಲ್ಲಿದ್ದೇವೆ ಎಂದು ರೈತರು ಹೇಳಿದ್ದಾರೆ.