ಹಾಸನ:ಎರಡೂವರೆ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಹಾಸನ ವಿಮಾನ ನಿಲ್ದಾಣದ ಕನಸಿಗೆ ರೆಕ್ಕೆಪುಕ್ಕ ಮೂಡುತ್ತಿವೆ. ಲೋಹದ ಹಕ್ಕಿಯ ಕನಸು ನನಸಾಗುವ ಕಾಲ ಕೂಡಿ ಬಂದಿದೆ ಎನಿಸುತ್ತದೆ.
ಜಿಲ್ಲೆಯಲ್ಲಿ ಲೋಹದ ಹಕ್ಕಿ ಹಾರಾಡಬೇಕೆಂಬ ಕನಸು ಜಿಲ್ಲೆಯ 15 ಲಕ್ಷ ಮಂದಿಯ ಬಹುದಿನದ ಕನಸಾಗಿದೆ. ಇದಕ್ಕಾಗಿಯೇ ಹೆಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಮತ್ತು ಐಐಟಿಗಾಗಿ ಸುಮಾರು 1,200 ಎಕರೆ ಭೂ ಸ್ವಾಧೀನ ಮಾಡಲಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಅದು ಚಿಗುರೊಡೆಯುವ ಹಂತಕ್ಕೆ ತಲುಪಿದೆ. ಇಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ವಿಮಾನ ನಿಲ್ದಾಣದ ಸ್ಥಳ ಪರಿಶೀಲನೆ ಮಾಡಿದ್ದಾರೆ. ಜಿಲ್ಲೆಯ ಜನರು ಹಾಗೂ ಜನಪ್ರತಿನಿಧಿಗಳ ಮಹತ್ವಾಕಾಂಕ್ಷೆಯ ವಿಮಾನ ನಿಲ್ದಾಣದ ಕನಸು ನನಸಾಗಲಿದ್ದು, ಮುಂದಿನ ವರ್ಷದೊಳಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದಿದ್ದಾರೆ ಕಪಿಲ್ ಮೋಹನ್.
ಅಷ್ಟಕ್ಕೂ ವಿಮಾನ ನಿಲ್ದಾಣದಿಂದ ಆಗುವ ಅನುಕೂಲವೇನು:
ಮಂಗಳೂರು-ಬೆಂಗಳೂರು ನಡುವೆ ಹಾಸನದಲ್ಲಿ ವಿಮಾನ ನಿಲ್ದಾಣವಾದರೆ ಈ ಕೆಳಗಿನ ಅನುಕೂಲಗಳಾಗುತ್ತವೆ..
- ವಿಶೇಷ ಆರ್ಥಿಕ ವಲಯ ಬೆಳೆಯುತ್ತದೆ
- ಜಿಲ್ಲೆಯ ಆರ್ಥಿಕ ಚಿತ್ರಣ ಬದಲಾವಣೆಗೆ ಅವಕಾಶವಾಗುತ್ತದೆ
- ಕೃಷಿ ಉತ್ಪನ್ನಗಳನ್ನು ನೇರವಾಗಿ ವಿದೇಶಕ್ಕೆ ರಫ್ತು ಮಾಡಲು ಅನುಕೂಲ
- ನಿರುದ್ಯೋಗ ಸಮಸ್ಯೆಯನ್ನು ಒಂದಿಷ್ಟು ಕಡಿಮೆ ಮಾಡಬಹುದು
ಹಾಸನದಲ್ಲಿ ವಿಮಾನ ನಿಲ್ದಾಣವಾದರೆ ಮಂಗಳೂರು ನಡುವಿನ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಇದರಿಂದ ಕೈಗಾರಿಕೋದ್ಯಮ ಮತ್ತಷ್ಟು ಬೆಳೆಯಲಿದೆ. ಬಂದರುಗಳಿಂದ ಬರುವ ಸಗಟುಗಳನ್ನು ಸಾಗಿಸಲು ಮತ್ತು ಜಿಲ್ಲೆಯಲ್ಲಿರುವ ಕೃಷಿ ಉತ್ಪನ್ನಗಳನ್ನು ಹೊರ ದೇಶಕ್ಕೆ ರಫ್ತು ಮಾಡಲು ಹೆಚ್ಚು ಅನುಕೂಲವಾಗುತ್ತದೆ. ಇದಲ್ಲದೆ ಜಿಲ್ಲೆಯ ಆರ್ಥಿಕ ಅಭಿವೃದ್ಧಿ ಕೂಡಾ ಹೆಚ್ಚಾಗಲಿದ್ದು, ಜಿಲ್ಲೆಯ ಯುವಕರಿಗೆ ಹೆಚ್ಚು ಉದ್ಯೋಗ ಸಿಗಲಿದೆ.
ವಿಮಾನ ನಿಲ್ದಾಣ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಈ ಕುರಿತಂತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಮಾತನಾಡಿ, ಬೇರೆ ಯಾವ ರಾಜ್ಯದಲ್ಲಿಯೂ ನಿರ್ಮಾಣವಾಗದಂಥ ವಿಮಾನ ನಿಲ್ದಾಣ ಹಾಸನದಲ್ಲಿ ನಿರ್ಮಾಣವಾಗುತ್ತಿದೆ. ಈಗಾಗಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾಗುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಕಾಮಗಾರಿ ಪ್ರಾರಂಭಿಸಲು ಆದೇಶ ಬಂದಿದ್ದು, ಇಂದು ನಿಲ್ದಾಣದ ಪರಿಶೀಲನೆಗಾಗಿ ಬಂದಿದ್ದೇವೆ. ಕರ್ನಾಟಕದಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಅತೀ ಹೆಚ್ಚು ವಿಮಾನ ಹಾರಾಟ ಮಾಡುತ್ತಿವೆ. ಈಗಾಗಲೇ ದೆಹಲಿ, ಬೆಂಗಳೂರು ತಿರುಪತಿಗೆ ವಿಮಾನ ಹಾರಾಟ ಮಾಡುತ್ತಿವೆ. ವಿಜಯಪುರ, ಕಾರವಾರದಲ್ಲಿಯೂ ಏರ್ ಪೋರ್ಟ್ ಕಾಮಗಾರಿ ನಡೆಯುತ್ತಿದೆ. ಹಾಸನದಲ್ಲಿ ಪ್ರಾರಂಭಿಸಿರುವ ಕಾಮಗಾರಿ ನೋಡಿದರೆ, ಇಡೀ ರಾಜ್ಯದಲ್ಲೇ ಇದು ಅತೀ ದೊಡ್ಡ ವಿಮಾನ ನಿಲ್ದಾಣವಾಗಿ ಹೊರ ಹೊಮ್ಮುತ್ತಿದೆ. ಈಗಾಗಲೇ ನಿಲ್ದಾಣಕ್ಕೆ ಇದ್ದ ಅಡ್ಡಿ ಆತಂಕಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಸರ್ಕಾರದ ಹಂತದಲ್ಲಿಯೂ ಚರ್ಚೆ ನಡೆದಿದ್ದು, ಮುಂದಿನ ವರ್ಷದಲ್ಲಿ ಜಿಲ್ಲೆಯ ಜನತೆಗೆ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದರು.
ವಿಮಾನ ನಿಲ್ದಾಣ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ವಿಮಾನ ನಿಲ್ದಾಣ ಕಾಮಗಾರಿಗೆ ಅಡ್ಡಿಯಾಗಿದ್ದ ವಿದ್ಯುತ್ ಕಂಬಗಳನ್ನು ಬದಲಿಸುವ ಕಾರ್ಯಕ್ಕೆ ಸುಮಾರು 20 ಕೋಟಿಗಳಷ್ಟು ಹಣ ಬೇಕಾಗುತ್ತದೆ. ಕೆಪಿಟಿಸಿಎಲ್ ವತಿಯಿಂದ ಸುಮಾರು 5.5 ಕೋಟಿ ವೆಚ್ಚದಲ್ಲಿ ಸರಿಪಡಿಸುವ ಕಾರ್ಯ ಮಾಡಿದ್ದು, ಇನ್ನು 15 ಕೋಟಿ ವೆಚ್ಚದಲ್ಲಿ ಸುಮಾರು 68 ವಿದ್ಯುತ್ ಪ್ರಸರಣ ಟವರ್ಗಳಿದ್ದು, ಅವುಗಳನ್ನು ಬೇರೆಡೆ ಸ್ಥಳಾಂತರಿಸಬೇಕಿದೆ. ಹಣ ಬಿಡುಗಡೆಯಾದ ಬಳಿಕ ಅದನ್ನು ಮಾಡಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಹಾಸನ ವಿಮಾನ ನಿಲ್ದಾಣ ಸುಮಾರು 25 ವರ್ಷಗಳ ಕನಸು. ಹಿಂದೆಯೇ ಇದಕ್ಕಾಗಿ ಸುಮಾರು 500 ಎಕರೆಯಷ್ಟು ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರವನ್ನು ನೀಡಿದ್ದಾರೆ. ಹೆಚ್ಚುವರಿ ಭೂಮಿ ಬೇಕಾಗಿದ್ದರಿಂದ ಈಗ ಮತ್ತೆ 200 ಎಕರೆ ಜಾಗವನ್ನು ಭೂಸ್ವಾಧೀನ ಮಾಡಿಕೊಂಡಿದ್ದು, ಅದಕ್ಕೆ ಪರಿಹಾರ ನೀಡಿಲ್ಲ. ಇಂದು ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದ್ದು, ಮುಂದಿನ ವರ್ಷ ಇದಕ್ಕೆ ಚಾಲನೆ ನೀಡಿದರೆ ಒಳ್ಳೆಯದು. ಕೃಷಿ ಚಟುವಟಿಕೆಗಳ ರಫ್ತುಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಹಾಗಾಗಿ ಕಾಮಗಾರಿಗೆ ಇರುವ ಅಡೆತಡೆಗಳನ್ನು ಬಗೆಹರಿಸಿ ಕಾಮಗಾರಿ ಪ್ರಾರಂಭಿಸಿದರೆ ಜಿಲ್ಲೆಯ ಜನರ ಕನಸು ನನಸಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಓದಿ: ಯೂಟ್ಯೂಬ್ ನೋಡಿ ದರೋಡೆಗೆ ಮಾಸ್ಟರ್ ಪ್ಲಾನ್.. ಅಷ್ಟೆಲ್ಲಾ ಮಾಡಿದ್ರೂ ನಡೀಲಿಲ್ಲ ಆಟ..
ಜನಸಾಮಾನ್ಯರಿಗೂ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಉಡಾನ್ ಯೋಜನೆಯಡಿ ಹಾಸನ, ಬೀದರ್ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಕೂಡಾ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಇದಕ್ಕೆ ಇಂಬು ಕೊಡುವಂತೆ ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಶೀಘ್ರವಾಗಿ ಯೋಜನೆ ತಯಾರಿಸಿ ಎಂದು ಆದೇಶಿಸಿದ ಬೆನ್ನಲ್ಲೇ ದೇವೇಗೌಡ್ರು ಪತ್ರಿಕಾಗೋಷ್ಠಿಯಲ್ಲಿ ಒಳ್ಳೆಯ ಬೆಳವಣಿಗೆಯಾಗುತ್ತೆ ಎಂದಿದ್ದರು. ಹೀಗಾಗಿ ಜಿಲ್ಲೆಯ ಜನರ ಮೂರು ದಶಕಗಳ ಕನಸು ಈಗ ಚಿಗುರೊಡೆದಿದೆ. ಮುಂದಿನ ದಿನದಲ್ಲಿ ಹಾಸನದಿಂದ ಲೋಹದ ಹಕ್ಕಿ ಬಾನಂಗಳದಲ್ಲಿ ಹಾರಾಟ ನಡೆಸುತ್ತಾ ಕಾದು ನೋಡಬೇಕಿದೆ.