ಕರ್ನಾಟಕ

karnataka

ETV Bharat / state

ಹಾಸನ ನಗರಸಭೆಗೆ 25 ಗ್ರಾಮಗಳ ಸೇರ್ಪಡೆ: ಸಚಿವ ಸಂಪುಟದಲ್ಲಿ ಗ್ರೀನ್ ​​​ಸಿಗ್ನಲ್

ನಗರದ ಸುತ್ತಮುತ್ತಲಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 25 ಗ್ರಾಮಗಳನ್ನು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಅಸ್ತು ಎಂದಿದೆ.

By

Published : Oct 2, 2020, 8:15 AM IST

Updated : Oct 2, 2020, 11:03 AM IST

Addition of 25 villages to Hassan Municipality
ಹಾಸನ ನಗರಸಭೆಗೆ 25 ಗ್ರಾಮಗಳ ಸೇರ್ಪಡೆ

ಹಾಸನ: ದಶಕಗಳ ಕನಸಿನ ಹೋರಾಟಕ್ಕೆ ಸದ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ. ಹಾಸನ ನಗರ ಮಹಾನಗರ ಪಾಲಿಕೆ ಆಗಬೇಕೆಂಬ ಬಯಕೆಗೆ ಪುಷ್ಠಿ ನೀಡಿದಂತಾಗಿದೆ.

ಕಳೆದ ಹತ್ತು ವರ್ಷಗಳಿಂದ ಜೆಡಿಎಸ್-ಕಾಂಗ್ರೆಸ್ ನಗರವನ್ನು ಮಹಾನಗರ ಪಾಲಿಕೆಯನ್ನಾಗಿ ಮಾಡಬೇಕೆಂದು ಶತ ಪ್ರಯತ್ನ ಮಾಡುತ್ತಲೇ ಬಂದಿದ್ದವು. ಇದಕ್ಕೆ ಬೇಕಾದಂತಹ ಎಲ್ಲಾ ಸೌಕರ್ಯಗಳನ್ನು ಮೂರೂ ಪಕ್ಷಗಳು ತಮ್ಮ ಅಧಿಕಾರದಲ್ಲಿ ಇದ್ದಾಗ ಮಾಡುತ್ತಲೇ ಬಂದಿದ್ದು, ಈಗಿನ ಬಿಜೆಪಿ ಸರ್ಕಾರದಲ್ಲಿ ಅದು ಚಿಗುರೊಡೆದು ಹಾಸನ ಜನರ ಮುಖದಲ್ಲಿ ಮಂದಹಾಸ ಮೂಡಿದೆ.

ಹಾಸನ ನಗರಸಭೆಗೆ 25 ಗ್ರಾಮಗಳ ಸೇರ್ಪಡೆ

ಗ್ರೀನ್ ಸಿಗ್ನಲ್ ಕೊಟ್ಟ ಸಚಿವ ಸಂಪುಟ: ನಗರದ ಸುತ್ತಮುತ್ತಲಿನ 9 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಮಾರು 25 ಗ್ರಾಮಗಳನ್ನು ನಗರಸಭಾ ವ್ಯಾಪ್ತಿಗೆ ಸೇರ್ಪಡೆ ಮಾಡಲು ಸಚಿವ ಸಂಪುಟ ಅಸ್ತು ಎಂದಿದೆ. ಸಭೆಯ 17 ಮತ್ತು 18ನೇ ವಿಷಯವಾಗಿ ಈ ವಿಚಾರಗಳನ್ನು ಮುಂದಿಟ್ಟಿದ್ದ ಶಾಸಕ ಪ್ರೀತಂ ಗೌಡ ಮನವಿಗೆ ಸಚಿವ ಸಂಪುಟ ಗ್ರೀನ್ ​​​ಸಿಗ್ನಲ್ ಕೊಟ್ಟಿದೆ.

9 ಗ್ರಾಮ ಪಂಚಾಯಿತಿಗಳ 25 ಗ್ರಾಮ ಸೇರ್ಪಡೆ: ಹಾಸನ ನಗರದ ಸುತ್ತಮುತ್ತಲಿನ ಸತ್ಯಮಂಗಲ, ಹರಳಹಳ್ಳಿ, ತೇಜೂರು, ಬಿ.ಕಾಟಿಹಳ್ಳಿ, ಭೂವನಹಳ್ಳಿ, ಮಣಚನಹಳ್ಳಿ, ಕಂದಲಿ, ತಟ್ಟೆಕೆರೆ ಹಾಗೂ ಹನುಮಂತಪುರ ಗ್ರಾಮ ಪಂಚಾಯಿತಿಗಳ 25 ಗ್ರಾಮಗಳನ್ನು ಹಾಸನ ನಗರಸಭೆಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ನಗರಸಭೆಯನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ಪೌರಾಡಳಿತ ಸಚಿವರಾದ ಡಾ. ನಾರಾಯಣಗೌಡ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ವಿಷಯವನ್ನು ಸಂಪುಟದ ಮುಂದೆ ಇಟ್ಟು ಅನುಮೋದನೆ ಪಡೆದುಕೊಂಡಿದ್ದಾರೆ.

1995ರಲ್ಲಿ ನಗರಸಭೆಯಾದ ಹಾಸನ ಪುರಸಭೆ: 25 ವರ್ಷಗಳ ಹಿಂದೆ ಪುರಸಭೆಯಾಗಿದ್ದ ಹಾಸನ 1995ರಲ್ಲಿ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದೆ. ಸದ್ಯ ಹಾಸನದಲ್ಲಿ 1.56 ಲಕ್ಷ ಮಂದಿ ವಾಸ ಮಾಡುತ್ತಿದ್ದಾರೆ. ಇಂದು ಸಚಿವ ಸಂಪುಟ ಅನುಮೋದನೆ ನೀಡಿದ ಬಳಿಕ ಹಾಸನ ನಗರದ ಸುತ್ತಮುತ್ತಲಿನ 25 ಗ್ರಾಮಗಳ ಸೇರ್ಪಡೆಯಿಂದ 2.26 ಲಕ್ಷ ಮಂದಿ ನಗರಸಭೆ ವ್ಯಾಪ್ತಿಗೆ ಸೇರಲಿದ್ದಾರೆ.

ಅಂಕಿ-ಅಂಶಗಳು:

  • ನಗರಸಭೆಯ ಜನಸಂಖ್ಯೆ : 1.56 ಲಕ್ಷ
  • 25 ಗ್ರಾಮಗಳ ಜನಸಂಖ್ಯೆ : 70,500
  • ನಗರಸಭೆಯ ವಿಸ್ತೀರ್ಣ : 26.50 ಚ.ಕಿ.ಮೀ.
  • 25 ಗ್ರಾಮಗಳ ವಿಸ್ತೀರ್ಣ. : 39.62 ಚ.ಕಿ.ಮೀ.
  • ಒಟ್ಟು ನಗರಸಭೆಯ ವಿಸ್ತೀರ್ಣ : 66.12 ಚ.ಕಿ.ಮೀ.

ಯುಜಿಡಿಗಾಗಿ 165 ಕೋಟಿ ಬಿಡುಗಡೆ: 25 ಗ್ರಾಮಗಳ ಸೇರ್ಪಡೆಯ ಜೊತೆಗೆ ನಗರದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಒಳಚರಂಡಿ ಕಾಮಗಾರಿಗೆ ಶಾಸಕ ಪ್ರೀತಂ ಗೌಡ, ಮುಖ್ಯಮಂತ್ರಿಗಳಿಗೆ ಪತ್ರ ಬರೆದು 165 ಕೋಟಿ ರೂ. ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಹಾಸನ ನಗರಸಭೆ ಮುಂದಿನ ದಿನಗಳಲ್ಲಿ ಸ್ವಚ್ಛ ನಗರವಾಗಲು ಎರಡು ಮಾತಿಲ್ಲ. ಅಲ್ಲದೆ ಸತ್ಯಮಂಗಲ ಮತ್ತು ವಿಜಯನಗರ ಬಡಾವಣೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಪಂಚಾಯಿತಿ. ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದ ಅನುದಾನ ಅಭಿವೃದ್ಧಿ ಮಾಡಲು ತುಂಬಾ ಕಷ್ಟವಾಗಿತ್ತು, ಆದ್ರೆ ನಗರಸಭಾ ವ್ಯಾಪ್ತಿಗೆ ಸೇರ್ಪಡೆಯಾಗುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ.

ಮಹಾನಗರ ಪಾಲಿಕೆ ಕನಸು ಮರೀಚಿಕೆ: ನಗರಸಭೆಯಿಂದ ಮಹಾನಗರ ಪಾಲಿಕೆಗೆ ಮುಂಬಡ್ತಿ ಪಡೆಯಬೇಕಾದರೆ ಮಹಾನಗರ ಪಾಲಿಕೆಗಳ ಕಾಯ್ದೆಯಡಿ ನಗರದಲ್ಲಿ ಕನಿಷ್ಠ 2 ಲಕ್ಷ ಜನಸಂಖ್ಯೆ ಹೊಂದಿರಬೇಕು. ಅಲ್ಲದೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕನಿಷ್ಠ 1 ಲಕ್ಷ ಜನಸಂಖ್ಯೆ ಇದ್ದು, ಒಟ್ಟಾರೆ 3 ಲಕ್ಷ ಜನಸಂಖ್ಯೆ ಹೊಂದುವುದರ ಜೊತೆಗೆ ನಗರದ ತೆರಿಗೆ ಹಣ 6 ಕೋಟಿಗೂ ಮಿಗಿಲಾಗಿ ಇರಬೇಕು. ಮತ್ತು ಜನಸಾಂದ್ರತೆ ಪ್ರತೀ ಚದುರ ಕಿಲೋ ಮೀಟರ್​​​ಗೆ ಮೂರು ಸಾವಿರ ಇದ್ದರೆ ಆಗ ಮಾತ್ರ ಮಹಾನಗರ ಪಾಲಿಕೆಯಾಗಲು ಸಾಧ್ಯ. ಹಾಗಾಗಿ ಹಾಸನದ ಮಟ್ಟಿಗೆ ಮಹಾನಗರ ಪಾಲಿಕೆ ಕನಸು ಮರೀಚಿಕೆಯಾಗಿದೆ. ಹೀಗಾಗಿ ಹಾಸನ ನಗರಸಭೆ ನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಬಹುದಷ್ಟೆ.

ಕರ್ನಾಟಕದಲ್ಲಿ 2007ರಲ್ಲಿ ರಾಜಧಾನಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯಾಗಿ ಬದಲಾಗಿದ್ದು, ಇದರೊಂದಿಗೆ ದಾವಣಗೆರೆ ಜಿಲ್ಲೆ ಕೂಡ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಶಿವಮೊಗ್ಗ ಮತ್ತು ತುಮಕೂರು ಕೂಡ 2009ರಲ್ಲಿ ಮಹಾನಗರ ಪಾಲಿಕೆ ಸ್ಥಾನ ಪಡೆದವು. ಹಾಸನ ಮಹಾನಗರ ಪಾಲಿಕೆ ಆಗಲು ಇನ್ನೂ 80 ಸಾವಿರ ಜನಸಂಖ್ಯೆ ಬೇಕಾಗಲಿದೆ. ಹೀಗಾಗಿ 25 ಗ್ರಾಮಗಳ ಸೇರ್ಪಡೆಯಾದರು ಮಹಾನಗರ ಪಾಲಿಕೆಯಾಗುವುದು ಬಹುತೇಕ ಅನುಮಾನ.

Last Updated : Oct 2, 2020, 11:03 AM IST

ABOUT THE AUTHOR

...view details