ಸಕಲೇಶಪುರ: ಕಿಡಿಗೇಡಿಗಳ ಗುಂಪೊಂದು ನೆಲದೊಳಗೆ ಹಾದುಹೋಗಿರುವ ಪೆಟ್ರೋಲ್ ಪೈಪ್‌ಲೈನ್ ತುಂಡರಿಸಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕದಿಯಲು ಯತ್ನ ಮಾಡಿ ವಿಫಲವಾಗಿರುವ ಘಟನೆ ತಾಲೂಕಿನ ಹಾನುಬಾಳ್ ಹೋಬಳಿ ಹುರುಡಿ ಸಮೀಪ ನಡೆದಿದೆ.
ತಡ ರಾತ್ರಿ ಹುರುಡಿ ಗ್ರಾಮದ ಸಮೀಪ ಹಾದು ಹೆೋಗಿರುವ ಪೆಟ್ರೋನೆಟ್ ಎಮ್‌ಹೆಚ್‌ಬಿ ಲಿಮಿಟೆಡ್‌ನ ಪೈಪ್‌ಲೈನ್ ಅನ್ನು ಹಿಟಾಚಿ ಯಂತ್ರದಿಂದ ಬಗೆದು ಪೆಟ್ರೋಲ್-ಡೀಸೆಲ್ ಕಳ್ಳತನ ಮಾಡಲು ವಾಲ್‌ಫಿಟ್ ಮಾಡಿ ಪೈಪ್ ಅಳವಡಿಸಿ ಡ್ರಿಲ್ ಮಾಡಲು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಎಂಹೆಚ್‌ಬಿ ಕಂಪನಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನೆರಿಯ ಸ್ಟೇಷನ್‌ನ ಸಿಗ್ನಲ್‌ನಲ್ಲಿ ಪೆಟ್ರೋಲ್ ಪೈಪ್‌ಲೈನ್‌ಗೆ ಡ್ರಿಲ್ ಮಾಡುತ್ತಿರುವುದು ಸೆನ್ಸಾರ್ ಮುಖಾಂತರ ಗೊತ್ತಾಗಿದೆ. ತಕ್ಷಣ ಕಂಪನಿಯ ಸಿಬ್ಬಂದಿಯನ್ನು ಸ್ಥಳಕ್ಕೆ ಪೊಲೀಸರ ಜೊತೆ ಕಳುಹಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರನ್ನು ನೋಡಿದ ಕಿಡಿಗೇಡಿಗಳು ಹಿಟಾಚಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.