ಆಲೂರು (ಹಾಸನ): ಪಂಚಾಯಿತಿ ಚುನಾವಣೆ ವಿಷಯವಾಗಿ ಯುವಕನಿಗೆ ಅದೇ ಗ್ರಾಮದ ಮತ್ತೋರ್ವ ಯುವಕ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಿರಳ್ಳಿ ಗ್ರಾಮದಲ್ಲಿ ನಡೆದಿದೆ. ಚೇತನ್ ಹಲ್ಲೆಗೊಳಗಾದ ಯುವಕನಾಗಿದ್ದು, ರಂಗೇಗೌಡ ಎಂಬಾತ ಮಚ್ಚಿನಿಂದ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ.
ಜಿಲ್ಲೆಯ ಆಲೂರು ತಾಲೂಕಿನ ಕಿರಳ್ಳಿ ಗ್ರಾಮದ ಚೇತನ್ (22) ರಾತ್ರಿ 10 ಗಂಟೆ ಸುಮಾರಿಗೆ ತನ್ನ ಸ್ನೇಹಿತ ಪ್ರಶಾಂತ್ನನ್ನು ಅವನ ಮನೆಯ ಹತ್ತಿರ ಬಿಟ್ಟು ಬರಲು ಹೋಗಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ರಂಗೇಗೌಡ (28) ಎಂಬುವವನು ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಕಿವಿ ಭಾಗಕ್ಕೆ ಬಲವಾದ ಮಚ್ಚಿನೇಟು ಬಿದ್ದಿದ್ದರಿಂದ ಅರ್ಧ ಕಿವಿ ಹಾಗೂ ಹಣೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಆಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚೇತನ್ ಚಿಕಿತ್ಸೆ ಪಡೆಯುತ್ತಿದ್ದಾನೆ.
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಕಿರಳ್ಳಿ ಗ್ರಾಮದ ಕೆಲವು ವ್ಯಕ್ತಿಗಳು ಗೊಲ್ಲರ ತಿಮ್ಮನಹಳ್ಳಿ ಗ್ರಾಮದ ರತ್ನಮ್ಮ ಎಂಬುವರಿಂದ ಹಣ ಪಡೆದು ನಾವೆಲ್ಲಾ ರತ್ನಮ್ಮ ಎಂಬುವವರಿಗೆ ಬೆಂಬಲಿಸೋಣ ಎಂದು ತೀರ್ಮಾನಿಸಿದ್ದರು. ಆದರೆ ಅದೇ ಗ್ರಾಮದ ಶಾಂತಮ್ಮ ಎಂಬುವರು ರತ್ನಮ್ಮ ವಿರುದ್ಧ ಸ್ಪರ್ಧೆ ಮಾಡಿದ್ದರು. ಪ್ರತಿಸ್ಪರ್ಧಿಯಾಗಿ ನಿಂತರಲ್ಲಾ ಎಂಬ ಕಾರಣಕ್ಕೆ ರತ್ನಮ್ಮನ ಕಡೆಯವರು ಕಳೆದ ಡಿ.22ರಂದು ಶಾಂತಮ್ಮ ಅವರ ಮಗ ಕಿರಣ್ ಬೈಕ್ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು.