ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಶಾಕ್ ಹಾಸನ: ದೇವಿಯ ದರ್ಶನಕ್ಕಾಗಿ ಕಾಯುತ್ತಿದ್ದ ಕೆಲವರಿಗೆ ವಿದ್ಯುತ್ ಪ್ರವಹಿಸಿದ ಪರಿಣಾಮ ಕೆಲಕಾಲ ನುಕುನುಗ್ಗಲು ಆದ ಘಟನೆ ಹಾಸನಾಂಬ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದಿದೆ. ಹಠಾತ್ ವಿದ್ಯುತ್ ಸ್ಪರ್ಶದಿಂದ ಕೆಲವರು ಅಸ್ವಸ್ಥಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕತ್ಸೆ ನೀಡಲಾಗುತ್ತಿದೆ. ವರ್ಷಕ್ಕೆ ಒಂದು ಬಾರಿ ತೆರೆಯಲ್ಪಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 2 ರಿಂದ ತೆರೆದಿದ್ದು ಇಂದು ಬೆಳಗ್ಗೆಯಿಂದ ಸರಿಸುಮಾರು 1 ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.
ಮಧ್ಯಾಹ್ನ 12.30ರ ವೇಳೆ ಉಚಿತ ದರ್ಶನದ ಸಾಲಿನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ನಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಪ್ರವಹಿಸಿದ್ದು ಭಕ್ತರು ಜೀವ ಉಳಿಸಿಕೊಳ್ಳಲು ಸ್ಥಳದಿಂದ ಓಡಿದ್ದಾರೆ. ಈ ವೇಳೆ ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಕೂಡಲೇ ಸ್ಥಳದಲ್ಲಿದ್ದ ಸ್ವಯಂಸ್ವೇವಕರು ಮತ್ತು ಸ್ಥಳೀಯರು, ಭಕ್ತರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. 20 ಭಕ್ತರಿಗೆ ವಿದ್ಯುತ್ ಶಾಕ್ ತಾಗಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
''ವಿದ್ಯುತ್ ಶಾಕ್ನಿಂದ ಈ ಘಟನೆ ನಡೆದಿದೆ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಅಲ್ಲಿಗೆ ವಿದ್ಯುತ್ ಹೇಗೆ ಬಂತು ಎಂಬುದನನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಸೆಸ್ಕಾಂ ಸಿಬ್ಬಂದಿ ಬಂದು ಪರಿಶೀಲನೆ ಮಾಡುತ್ತಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದಾರೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಎಂ.ಎಸ್. ಸುಜೀತಾ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದವರ ಆರೋಗ್ಯವನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ವಿಚಾರಿಸಿ ಘಟನೆ ಬಗ್ಗೆ ವಿವರ ಪಡೆದರು.
ಹಾಸನದ ಹಾಸನಾಂಬೆ ದೇವಸ್ಥಾನದಲ್ಲಿ ದರ್ಶನದ ವೇಳೆ ನೂಕುನುಗ್ಗಲು ಉಂಟಾಗಿದ್ದು, ಈ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದೆ. ಓರ್ವ ಬಾಲಕಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದಂತೆ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪ್ರತಿಕ್ರಿಯೆ:ನೂಕುನುಗ್ಗಲು ಆಗಿದ್ದರಿಂದ ಗಾಬರಿಯಲ್ಲಿ ಜನ ಸ್ವಲ್ಪ ಆತಂಕಗೊಂಡಿದ್ದರು. ಆದರೆ, ಯಾವುದೇ ಆಘಾತಕಾರಿ ಘಟನೆ ನಡೆದಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿದ್ಯುತ್ ತಂತಿ ಬ್ಯಾರಿಕೇಡ್ಗೆ ತಾಗಿದ್ದರಿಂದ ಈ ಘಟನೆ ಆಗಿದೆ. ಓರ್ವ ಮಹಿಳೆಗೆ ಸ್ವಲ್ಪ ಗಾಯ ಆಗಿದೆ. ಬೇರೆ ಯಾರಿಗೂ ಸಮಸ್ಯೆ ಆಗಿಲ್ಲ. ಈ ಗಾಬರಿಯಲ್ಲಿ ಸ್ವಲ್ಪ ತುಳಿತ ಆಗಿದೆ. ಸದ್ಯ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ. ಶಾಸಕರು, ಸಂಸದರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆತಂಕಕಾರಿ ಅಂಶ ಏನೂ ಇಲ್ಲ. ಇವಾಗ ದರ್ಶನ ಮತ್ತೆ ಪ್ರಾರಂಭ ಆಗಿದೆ. ಹಾಸನ ಜಿಲ್ಲಾಧಿಕಾರಿ ಬೆಂಗಳೂರಿಗೆ ಬಂದಿದ್ದರು, ಪುನಃ ಸ್ಥಳಕ್ಕೆ ಹೋಗ್ತಿದ್ದಾರೆ. ನಾನು ಘಟನಾ ಸ್ಥಳಕ್ಕೆ ತೆರಳುತ್ತಿದ್ದೇನೆ. ಯಾವುದೇ ದೊಡ್ಡ ಆಘಾತಕಾರಿ ಘಟನೆ ನಡೆದಿಲ್ಲ. ಭಕ್ತರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸಿಎಂ ಘಟನೆ ಬಗ್ಗೆ ಡಿಸಿ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯೆ
ಘಟನೆಯನ್ನು ಯಾರೋ ಸೃಷ್ಟಿ ಮಾಡಿದ್ದಾರೆ ಎಂಬ ಹಾಸನ ಜಿಲ್ಲಾಧಿಕಾರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅದು ಅವರ ಅಭಿಪ್ರಾಯ, ನಾನು ಅದರ ಪರನೂ ಅಲ್ಲ ವಿರುದ್ಧನೂ ಅಲ್ಲ. ಅಲ್ಲಿ ಹೋದ ಬಳಿಕ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.
ಹಾಸನಾಂಬ ಪವಾಡ:ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಮಾತ್ರ ತೆರೆಯುವ ಹಾಸನಾಂಬ ದೇವಾಲಯ, ಪ್ರತಿವರ್ಷ ದರ್ಶನದ ನಂತರ ಗರ್ಭಗುಡಿ ಬಾಗಿಲು ಹಾಕಿ, ಹಣತೆ ಹಚ್ಚಿ ನೈವೇದ್ಯ ಇಟ್ಟು ಹೂವು ಇಡುತ್ತಾರೆ. ಆದರೆ, ಒಂದು ವರ್ಷದ ನಂತರ ಗರ್ಭಗುಡಿ ಬಾಗಿಲು ತೆಗೆದಾಗ ಹಚ್ಚಿದ ಹಣತೆ ಆರಿರುವುದಿಲ್ಲ, ಇಟ್ಟ ನೈವೇದ್ಯ ಕೆಟ್ಟಿರುವುದಿಲ್ಲ, ಮುಡಿಸಿದ ಹೂವು ಬಾಡಿರುವುದಿಲ್ಲ. ಈ ರೀತಿಯ ನಂಬಿಕೆ ಇಂದಿಗೂ ಸತ್ಯವಾಗಿದ್ದು ಇಂದಿಗೂ ಪವಾಡವಾಗಿದೆ. ಅದಕ್ಕಾಗಿ ವರ್ಷದಲ್ಲಿ ಒಂದು ಬಾರಿ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾಗಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ.
ಇದನ್ನೂ ಓದಿ:ಬೆಂಗಳೂರಿನ 62 ಮೈದಾನಗಳಲ್ಲಿ 320 ತಾತ್ಕಾಲಿಕ ಪಟಾಕಿ ಮಳಿಗೆಗಳಿಗೆ ಅವಕಾಶ