ಹಾಸನ:ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶ್ರೀರಾಮಸೇನೆಯ ರಾಜ್ಯಕಾರಣಿ ಸಭೆಯ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ’’ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಕೆಲ ವಿಷಯಗಳನ್ನು ವಾಪಸ್ ಪಡೆಯುತ್ತೇವೆ ಅಂದಿದ್ದಾರೆ. ಭಗತ್ ಸಿಂಗ್, ಸಾವರ್ಕರ್ ಸೇರಿದಂತೆ ಮೂರು ಪಾಠ ವಾಪಾಸ್ ತೆಗೆದುಕೊಳ್ಳುತ್ತೇವೆ ಅಂದ್ದಿದ್ದಾರೆ. ಸಾವರ್ಕರ್, ಭಗತ್ ಸಿಂಗ್ ಇವರೆಲ್ಲಾ ದೇಶಕ್ಕಾಗಿ ಜೀವ ಮುಡುಪಿಟ್ಟವರು. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಭದ್ರತೆ ಬಗ್ಗೆ ಕಾಳಜಿ ಇಲ್ಲ. ಉತ್ತಮ ವಿಚಾರ ಯಾರು ಬರೆದರೆ ಏನು? ವಿಷಯ ಮುಖ್ಯ. ನೀವು ಶಿಕ್ಷಣ ಪಡೆಯುವ ಮಕ್ಕಳ ವಿಚಾರದಲ್ಲಿ ರಾಜಕೀಯ ಮಾಡಬೇಡಿ‘‘ ಎಂದರು.
ಅಧಿಕಾರಕ್ಕೆ ಬಂದರೆ ಏನು ಬೇಕಾದರೂ ಮಾಡಬಹುದೇನು? ಇದ್ರಿಷ್ ಪಾಷಾ ಎಂಬ ಗೋವು ಕಳ್ಳನಿಗೆ 25 ಲಕ್ಷ ಕೊಟ್ಟಿದ್ದು, ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಇದು ರೈತರಿಗೆ ಮಾಡಿದ ದ್ರೋಹ ಎಂದು ಕಿಡಿಕಾರಿದರು. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಕೆಲವರಿಗೆ ಮದ ಬಂದಿದೆ. ಹಿಂದೂ ಸಂಘಟನೆ ಬ್ಯಾನ್ ಮಾಡುತ್ತೇವೆ, ಹಲಾಲ್, ಹಿಜಾಬ್ ಬಗ್ಗೆ ಮಾತನಾಡಿದರೆ ಒದ್ದು ಒಳಗೆ ಹಾಕುತ್ತೇವೆ ಅಂತ ಕೆಲವು ಮಂತ್ರಿಗಳೇ ಹೇಳುತ್ತಿದ್ದಾರೆ. ಇಂದಿರಾ ಗಾಂಧಿ ಕಾಲದಲ್ಲಿ ಎಮರ್ಜನ್ಸಿ ಹೇರಿದ್ದಾಗ ಹಿಂದೂ ಸಂಘಟನೆ ಹೆದರಲಿಲ್ಲ ಎಂದು ಸರ್ಕಾರದ ವಿರುದ್ಧ ಮುತಾಲಿಕ್ ಹರಿಹಾಯ್ದರು.