ಹಾಸನ: ಕೇವಲ 48 ಗಂಟೆಗಳಲ್ಲಿ ಶೂಟೌಟ್ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಡಿಕೇರಿ ತಾಲೂಕಿನ ಅಮಕ್ಕಂದೂರು ಗ್ರಾಮದ ಕಾಫಿತೋಟದ ಮಾಲೀಕ ಕೆ.ಟಿ. ಅನುಕೂಲ್ (41), ಚಾಲಕ ಸುರೇಶ್ (36) ಅಡುಗೆ ಕೆಲಸ ಮಾಡುವ ಸತೀಶ್ (34) ಮತ್ತು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಸಮೀಪದ ಕಟ್ಟೆಹೊಳೆ ಗ್ರಾಮದ ಜೆ.ಸಿ. ಸುದೀನ್ ಕುಮಾರ್ @ ಆದರ್ಶ್ (30) ಬಂಧಿತ ಆರೋಪಿಗಳು.
ಯಾರು ಈ ಸಂತೋಷ್..? ಏನಿದು ಘಟನೆ?
ಹಾಸನ ನಗರದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ವಾಸವಾಗಿದ್ದ ವಿದ್ಯುತ್ ಇಲಾಖೆಯ ಸಹಾಯಕ ಅಭಿಯಂತರ ಸಂತೋಷ್ ಮತ್ತು ಜಯಶ್ರೀ 13 ವರ್ಷಗಳ ಹಿಂದೆ ಪ್ರೀತಿ ಮಾಡಿ ವಿವಾಹ ಆಗಿದ್ದರು. ಇವರಿಬ್ಬರಿಗೆ ಈಗ ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಮದುವೆಯಾದ ಹೊಸದರಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಸಂಸಾರ ಮಾಡುತ್ತಿದ್ದ. ಇದೇ ವೇಳೆಗೆ ಸಂತೋಷ್ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ ಅನುಕಂಪದ ಆಧಾರದ ಮೇಲೆ ತಂದೆಯ ಕೆಲಸ ಈತನಿಗೆ ನೀಡಲಾಗಿತ್ತು. ಪ್ರೀತಿಸಿ ಮದುವೆಯಾಗಿದ್ದ ಈತ ತಂದೆಯ ಕೆಲಸವನ್ನು ಗಿಟ್ಟಿಸಿಕೊಂಡಿದ್ದ. ಇದಾದ ನಂತರ ಸರ್ಕಾರಿ ಕೆಲಸದ ಅಮಲಿನಲ್ಲಿ ಕುಡಿತದ ದಾಸನಾಗಿ ಪ್ರತಿನಿತ್ಯ ಹೆಂಡತಿಗೆ ಕಿರುಕುಳ ಕೊಡುತ್ತಿದ್ದ. ಇಷ್ಟೆ ಅಲ್ಲ, ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗದೆ ಗೈರು ಹಾಜರಾಗಿದ್ದು, ಕಚೇರಿಯಿಂದ ಹಲವು ನೋಟಿಸ್ ಕೂಡಾ ಬಂದಿವೆಯಂತೆ.
ಕಿರುಕುಳದ ಹಿನ್ನೆಲೆ ಕೊಲೆ:
ಜ.15 ರಂದು ಹಾಸನ ನಗರದ ಹೊರವಲಯದಲ್ಲಿನ ಹೂವಿನಹಳ್ಳಿ ಕಾವಲು ಬಳಿ ಸಂತೋಷ್ ಮೃತದೇಹ ಪತ್ತೆಯಾಗಿದೆ. ಈತನಿಗೆ ಕಂಠಪೂರ್ತಿ ಕುಡಿಸಿ ಬಳಿಕ ಬಂದೂಕಿನಿಂದ ಕೊಲೆಗೈಯ್ಯಲಾಗಿತ್ತು. ತದ ನಂತರ ಸಂತೋಷನ ಭಾಮೈದುನನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ.