ಕರ್ನಾಟಕ

karnataka

ಕಾಡಾನೆ ದಾಳಿಗೆ ಮತ್ತೊಂದು ಬಲಿ: ಹೆಚ್ಚಿದ ಗ್ರಾಮಸ್ಥರ ಆಕ್ರೋಶ

By

Published : Apr 3, 2021, 11:47 AM IST

ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಬಲಿ
ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಬಲಿ

ಸಕಲೇಶಪುರ: ಕಾಡಾನೆ ದಾಳಿಗೆ ಅಮಾಯಕ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ತಾಲೂಕಿನ ಹಳೆಕೆರೆ ಗ್ರಾಮದಲ್ಲಿ ನಡೆದಿದೆ.

ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಬಲಿ

ತಾಲೂಕಿನ ಕುಣಿಗನಹಳ್ಳಿ ಗ್ರಾಪಂ ವ್ಯಾಪ್ತಿಯ ಹಳೆಕೆರೆ ಗ್ರಾಮದ ನಿವಾಸಿ ಶಿವಣ್ಣಗೌಡ (60) ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿ. ಕೊಡಗಿನ ಕುಶಾಲನಗರಕ್ಕೆ ಹೋಗಿ ತಮ್ಮ ಮನೆಗೆ ಹಿಂತಿರುಗಲು ಜಮ್ಮನಹಳ್ಳಿಯಿಂದ ಹಳೆಕೆರೆಗೆ ಶುಕ್ರವಾರ ಸಂಜೆ 6.30 ರ ವೇಳೆಯಲ್ಲಿ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಶುಕ್ರವಾರ ರಾತ್ರಿ ಶಿವಣ್ಣಗೌಡ ಮನೆಗೆ ಬಾರದ ಕಾರಣ ಶನಿವಾರ ಮುಂಜಾನೆ ಗ್ರಾಮಸ್ಥರ ಸಹಾಯದಿಂದ ಶಿವಣ್ಣನನ್ನು ಹುಡುಕಿದಾಗ ಮೃತ ದೇಹ ಪತ್ತೆಯಾಗಿದೆ.

ಕಳೆದ ಫೆಬ್ರವರಿ 25 ರಂದು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾಡಾನೆಯೊಂದು ವಕೀಲ್ ಎಂಬಾತನನ್ನು ತುಳಿದು ಸಾಯಿಸಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಸಾವು ಸಂಭವಿಸಿರುವುದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ‌. ಸಕಲೇಶಪುರ ಭಾಗದಲ್ಲಿ ಸುಮಾರು 60 ರಿಂದ 70 ಕಾಡಾನೆಗಳಿದ್ದು, ಬೆಳೆ ಹಾಗೂ ಮನುಷ್ಯರ ಮೇಲೆ ನಿರಂತರ ದಾಳಿ ನಡೆಸುತ್ತಿವೆ.

ಇನ್ನು ಕಾಡಾನೆ ದಾಳಿಯಿಂದ ಈಗಾಗಲೇ ಹಲವಾರು ಸಾವು - ನೋವು ಸಂಭವಿಸಿದೆ. ಆದರೆ ಈ ಸಮಸ್ಯೆ ಬಗೆಹರಿಸಲು ಯಾರು ಮುಂದಾಗುತ್ತಿಲ್ಲ. ಅರಣ್ಯ ಸಚಿವರು ಬೆಳೆಗಾರರ ಜೊತೆ ಸಮಾಲೋಚನೆ ಸಭೆ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.

ABOUT THE AUTHOR

...view details