ಹಾಸನ:ಜಿಲ್ಲೆಯ ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದಲ್ಲಿ ಪಿಎಫ್ ಸಾಲ್ಡಾನ ಎಂಬುವರ ತೋಟದಲ್ಲಿ ಮೆಣಸು ಕಾಯುವ ಕೆಲಸ ಮಾಡುತ್ತಿದ್ದ ಕೇರಳ ಮೂಲದ ರಾಜನ್ (45) ಎಂಬ ವ್ಯಕ್ತಿ ಕಾಡಾನೆ ದಾಳಿಯಿಂದ ಸಾವಿಗೀಡಾಗಿದ್ದಾರೆ.
ಇಂದು ಮೆಣಸಿನ ತೋಟಕ್ಕೆ ರಾಜನ್ ಹೋದ ವೇಳೆ ಹಿಂದಿನಿಂದ ದಾಳಿ ನಡೆಸಿದ ಕಾಡಾನೆ ಆತನನ್ನು ಕೊಂದು ಹಾಕಿದೆ. ಕಾಫಿ ಗಿಡದ ಮಧ್ಯೆ ಇದ್ದ ಆನೆ ಏಕಾಏಕಿ ದಾಳಿ ನಡೆಸಿದ್ದರಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಮೃತ ವ್ಯಕ್ತಿಗೆ ಪರಿಹಾರದ ಜೊತೆಗೆ ಶಾಶ್ವತವಾಗಿ ಕಾಡಾನೆಗಳ ಹಾವಳಿಯನ್ನು ತಪ್ಪಿಸಬೇಕೆಂದು ಪಟ್ಟು ಹಿಡಿದಿದ್ದರು. ಘಟನೆ ವಿಚಾರ ತಿಳಿದರೂ ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಮತ್ತು ಕಾಫಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ರು.
ಹಾಸನದಲ್ಲಿ ಕಾಡಾನೆಗಳ ಉಪಟಳ ಹೆಚ್ಚಳ ಆನೆ ತುಳಿದು ಸಾವಿಗೀಡಾಗಿದ್ದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಾರದಿರುವುದಕ್ಕೆ ಏನು ಕಾರಣ?. ಮಲೆನಾಡಿಗರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸುತ್ತಿರುವುದು ಶುದ್ಧ ಸುಳ್ಳು. ಬೇಲೂರು ತಾಲೂಕಿನಲ್ಲಿ ಸ್ವಂತ ಜಮೀನನ್ನ ಹೊಂದಿರುವವರೇ ಹೆಚ್ಚು. ಇಲ್ಲಿ ಯಾರು ಒತ್ತುವರಿ ಮಾಡಿಕೊಂಡಿಲ್ಲ. ಕೊಡಗು ಮತ್ತು ಸಕಲೇಶಪುರ ಭಾಗ ಗಡಿಭಾಗದ ಅರಣ್ಯಪ್ರದೇಶವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಆ ಭಾಗದಲ್ಲಿ ವಾಸಿಸುತ್ತಿದ್ದ ಕಾಡಾನೆಗಳು ಕಾಡಿನಲ್ಲಿ ಆಹಾರ ಸಿಗದೇ ಅಲ್ಲಿಂದ ಈ ಭಾಗದ ಕಡೆಗೆ ವಲಸೆ ಬರುತ್ತಿವೆ. ದಯಮಾಡಿ ಮುಂದಾದರೂ ಪ್ರಾಣಿಗಳಿಗೆ ಬೇಕಾದಂತಹ ಆಹಾರದ ಗಿಡಗಳನ್ನು ಅಲ್ಲಿಯೇ ಬೆಳೆಸಬೇಕು. ಇಲ್ಲ ಆನೆ ಹಾವಳಿಗೆ ಶಾಶ್ವತವಾದಂತಹ ಪರಿಹಾರವನ್ನು ಕಲ್ಪಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಓದಿ:ಹೆಣ್ಣಾನೆ ಸಾವು ಪ್ರಕರಣ: ಗುಂಡಿಕ್ಕಿ ಕೊಲೆ ಮಾಡಲಾಗಿದೆ ಎಂದ ಅರಣ್ಯಾಧಿಕಾರಿಗಳು
ಕಳೆದ ವರ್ಷ ಇಬ್ಬರು ಕೂಲಿ ಕಾರ್ಮಿಕರನ್ನು ಹಾಗೂ ಒಬ್ಬ ಪುರೋಹಿತನನ್ನು ಕಾಡಾನೆ ಬಲಿತೆಗೆದುಕೊಂಡಿತ್ತು. ಚಿಕ್ಕಮಗಳೂರು ಭಾಗದ ಕಡೆಯಿಂದ ಬಂದಿದ್ದ ಆನೆಯನ್ನು ಓಡಿಸುವ ಮೂಲಕ ಅರಣ್ಯಾಧಿಕಾರಿಗಳು ನಮ್ಮ ಕಣ್ಣೊರೆಸುವ ತಂತ್ರಗಾರಿಕೆ ಮಾಡಿದರು. ಆದರೆ ಇವತ್ತು ಬೇಲೂರಿನಲ್ಲಿ ವರ್ಷದ ಪ್ರಾರಂಭದಲ್ಲಿ ಕಾರ್ಮಿಕನ ಬಲಿ ತೆಗೆದುಕೊಂಡಿರುವುದು ಈ ಭಾಗದ ಕಾಫಿ ಬೆಳಗಾರರಿಗೆ ಮತ್ತು ಕಾರ್ಮಿಕರಿಗೆ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಮೊದಲು ಸಕಲೇಶಪುರ ಭಾಗದಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳು, ಈಗ ಬೇಲೂರು ಭಾಗದ ಕಾಫಿ ತೋಟಕ್ಕೆ ಲಗ್ಗೆ ಇಡುವ ಮೂಲಕ ಆತಂಕ ಸೃಷ್ಟಿಸುತ್ತಿವೆ. ಜನವರಿ 5ರಂದು ಕಾಡಾನೆ ಸಮಸ್ಯೆಗೆ ಸಭೆ ಕರೆದು ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಜನವರಿ 5 ರಂದು ಕಾಲ್ನಡಿಗೆ ಜಾಥಾ ಮೂಲಕ ಸರ್ಕಾರದ ಗಮನಸೆಳೆದು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.