ಹಾಸನ: ಜಮೀನು ವಿವಾದಲ್ಲಿ ದಾಯಾದಿಗಳ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾರಗೊಂಡನಹಳ್ಳಿಯಲ್ಲಿ ಇಂತಹುದೊಂದು ಧಾರುಣ ಘಟನೆ ನಡೆದಿದ್ದು, ರಕ್ತದ ಕೋಡಿ ಹರಿದಿದೆ.
ಮಲ್ಲೇಶ್(58), ರವಿಕುಮಾರ್, (35 ) ಮಂಜೇಶ್ (35) ಕೊಲೆಯಾದ ದುರ್ದೈವಿಗಳಾಗಿದ್ದು, ಕೊಲೆ ಮಾಡಿ ಆರೋಪಿ ಪಾಪಣ್ಣಿ ಕೂಡಾ ಸ್ವತಃ ಚಾಕುವಿನಿಂದ ಇರಿದುಕೊಂಡು ಸಾವಿಗೀಡಾಗಿದ್ದಾನೆ.
ಘಟನೆ ವಿವರ :ಕೊಲೆಯಾದವರು ಮತ್ತು ಆರೋಪಿ ಪಾಪಣ್ಣಿ ಮೂರು ತಲೆಮಾರಿನ ದಾಯಾದಿಗಳು. 12 ಎಕರೆ ಜಮೀನಿನ ಹಂಚಿಕೆ ವಿಚಾರದಲ್ಲಿ ಇವರು 20 ವರ್ಷಗಳ ಹಿಂದೆ ನ್ಯಾಯಾಲಯ ಮೆಟ್ಟಿಲೇರಿದ್ರು. 4 ಬಾರಿ ಮಲ್ಲೇಶ್ ಪರವಾಗಿಯೇ ತೀರ್ಪು ಬಂದಿತ್ತು. ಪಾಪಣ್ಣಿ ಹೈಕೋರ್ಟ್ ಮೆಟ್ಟಿಲೇರಿದ್ರು. ಮೊನ್ನೆ ಹೈಕೋರ್ಟಿನಲ್ಲಿಯೂ ಮಲ್ಲೇಶ್ ಪರವಾಗಿಯೇ ತೀರ್ಪು ಬಂದಿತ್ತು. ಜೊತೆಗೆ ಮಲ್ಲೇಶ್ ಕಳೆದ 20 ವರ್ಷದಿಂದಲೂ ತನ್ನ ಸ್ವಾಧಿನದಲ್ಲಿಯೇ ಜಮೀನನ್ನು ಉಳಿಮೆ ಮಾಡಿಕೊಂಡು ಬರುತ್ತಿದ್ರು. ಮಳೆಯಾದ ಹಿನ್ನಲೆ ಜಮೀನು ಉಳುಮೆ ಮಾಡಲು ಹೋದಾಗ ಏಕಾ ಏಕಿ ಬಂದ ಪಾಪಣ್ಣಿ ಮೂರು ಮಂದಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಇಂದು ಮಧ್ಯಾಹ್ನ ಘಟನೆ ನಡೆದಿದೆ. ಘಟನೆ ನಡೆಯುವ ಮುನ್ನ ಮಲ್ಲೇಶ್ ಪೊಲೀಸ್ ಠಾಣೆಗೆ ಬಂದು ನಮಗೆ ರಕ್ಷಣೆ ಕೊಡಬೇಕೆಂದು ಕೇಳಿದ್ರು. ಅದ್ರಂತೆ ಪೊಲೀಸ್ ಸಿಬ್ಬಂದಿಯೊಬ್ಬರು ಘಟನಾ ಸ್ಥಳಕ್ಕೆ ಬಂದಿದ್ದು, ಪಾಪಣ್ಣಿ ಯಾವುದೇ ತೊಂದರೆ ಕೊಡದಂತೆ ನೋಡಿಕೊಳ್ಳುತ್ತಿರುವಾಗಲೇ ಏಕಾ ಏಕಿ ಒಂದು ಮಂಜೇಶ್ ಎದೆಗೆ ಪಾಪಣ್ಣಿ ತಾನು ತಂದಿದ್ದ ಚಾಕುವಿನಿಂದ ಚುಚ್ಚಿದ್ದಾನೆ. ರಕ್ಷಣೆ ಮಾಡಲು ಹೋದ ಸಹೋದರ ಮಲ್ಲೇಶ್ ಮೇಲೆಯೂ ಹಲ್ಲೆ ಮಾಡಿ ಎದೆಗೆ ಚುಚ್ಚಿ ಕೊಲೆಗೈದ ಬಳಿಕ ಇವರಿಬ್ಬರ ಪಕ್ಕದಲ್ಲಿಯೇ ಇದ್ದ ಮಲ್ಲೇಶ್ ಅಳಿಯ ರವಿಕುಮಾರ್ ಎಂಬುವರಿಗೂ ಮನಸೋ ಇಚ್ಚೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ.
ಆರೋಪಿ ಪಾಪಣ್ಣಿ ಯೊಂದಿಗೆ ಬಂದಿದ್ದ 3-4 ಮಂದಿ ತಲೆ ಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ವಿಶೇಷ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸುತ್ತೇವೆ ಎಂದು ಎಸ್ಪಿ ನಂದಿನಿ ಮಾಹಿತಿ ನೀಡಿದ್ದಾರೆ.