ಹಾಸನ : ತಾಯಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ ಎಂಬುದು ಪೊಲೀಸರ ತನಿಖೆಯಿಂದ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ರೀಲ್ಸ್ನಲ್ಲಿ ಪರಿಚಯವಾಗಿ ಸಲುಗೆಯಿಂದ ಇದ್ದ ವ್ಯಕ್ತಿಯೇ ಆಕೆಯ ಜೀವಕ್ಕೆ ಮುಳುವಾಗಿದ್ದಾನೆ. ವಿಜಯಪುರ ಮೂಲದ ನಿಂಗಪ್ಪ ಕಾಗವಾಡ (38) ತನ್ನ ಸ್ನೇಹಿತೆ ಮತ್ತು ಆಕೆಯ ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದು, ತನಿಖೆಯಿಂದ ಬಯಲಾಗಿದೆ.
ಏನಿದು ಘಟನೆ : ಮೃತ ಶಿವಮ್ಮ ಪತಿ ತೀರ್ಥಪ್ರಸಾದ್ ಅವರು ವಿಜಯಪುರದಲ್ಲಿ ಬೇಕರಿ ಇಟ್ಟಿದ್ದರು. ಈ ವೇಳೆ ವಿಜಯಪುರ ಮೂಲದ ನಿಂಗಪ್ಪ ಕಾಗವಾಡ ಹಾಗೂ ಶಿವಮ್ಮನ ನಡುವೆ ಸ್ನೇಹ ಬೆಳೆದಿತ್ತು. ವಿಜಯಪುರದಲ್ಲಿ ವ್ಯಾಪಾರ ಲಾಸ್ ಆಗಿದ್ದರಿಂದ ಬೇಕರಿ ಮುಚ್ಚಿ ವಾಪಸ್ ಬಂದು ತುಮಕೂರಿನ ಬೇಕರಿಯಲ್ಲಿ ಶಿವಮ್ಮ ಪತಿ ತೀರ್ಥಪ್ರಸಾದ್ ಕೆಲಸ ಮಾಡುತ್ತಿದ್ದರು. ದೂರವಿದ್ದ ಗಂಡನಿಗೆ ಮರೆಮಾಚಿ ಗೆಳೆಯ ನಿಂಗಪ್ಪನ ಜೊತೆ ಶಿವಮ್ಮ ಸಲುಗೆಯಿಂದಿದ್ದಳು. ಕಾರು ಚಾಲಕ ಎಂದು ತನ್ನ ಪತಿಗೆ ಗೆಳೆಯನ ಪರಿಚಯ ಮಾಡಿಕೊಟ್ಟಿದ್ದಳು. ರೀಲ್ಸ್ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯನ್ನು ಹೊಸ ವರ್ಷದ ಆಚರಣೆ ಮಾಡಲು ಶಿವಮ್ಮ ಆತನನ್ನು ಕರೆಸಿಕೊಂಡಿದ್ದಳು ಎಂದು ಅನ್ನೋದನ್ನು ಪೊಲೀಸರು ತಿಳಿಸಿದ್ದಾರೆ.
ಹೊಸ ವರ್ಷಾಚರಣೆಗೆ ಶಿವಮ್ಮ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಶಿವಮ್ಮ ಹಾಗೂ ಆರೋಪಿ ನಡುವೆ ಹಣಕ್ಕೆ ಜಗಳವಾಗಿದೆ. ಆರೋಪಿ ಹಣ ನೀಡುವಂತೆ ಪೀಡಿಸಿದ್ದಾನೆ. ನಿರಾಕರಿಸಿದ್ದಕ್ಕೆ ಕತ್ತು ಹಿಸುಕಿ ಶಿವಮ್ಮನನ್ನು ಕೊಲೆ ಮಾಡಿದ್ದಾನೆ. ಬಳಿಕ ಇಬ್ಬರು ಮಕ್ಕಳನ್ನು ಕೊಂದು ಅಡುಗೆ ಸಿಲಿಂಡರ್ ಪೈಪ್ ತೆಗೆದು ಶಿವಮ್ಮನ ಮೊಬೈಲ್, ತಾಳಿಯೊಂದಿಗೆ ನಿಂಗಪ್ಪ ಪರಾರಿ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನ ಪತ್ತೆ ಹಚ್ಚಿದ ಮೊಬೈಲ್ : ಇನ್ನು ಕಳ್ಳ ಏನೇ ಕದ್ದರೂ ಯಾವುದಾದರೂ ಒಂದು ಸುಳಿವು ಬಿಟ್ಟು ಹೋಗಿರುತ್ತಾನೆ ಎಂಬುದಕ್ಕೆ, ಶಿವಮ್ಮ ಮೈಮೇಲಿದ್ದ ಚಿನ್ನದ ಸರ ಕಸಿದು ಪರಾರಿ ಆಗಿದ್ದಷ್ಟೇ ಅಲ್ಲದೆ, ಆಕೆಯ ಮೊಬೈಲ್ ಕಳ್ಳತನ ಮಾಡಿದ ಮೂರು ದಿನಗಳ ಬಳಿಕ ಅದನ್ನು ಆನ್ ಮಾಡಿದ್ದರಿಂದ, ಆರೋಪಿ ನಿಂಗಪ್ಪ ಕಾಗವಾಡ ಪೊಲೀಸರ ಕೈಗೆ ಸುಲಭವಾಗಿ ತಗಲಾಕಿಕೊಂಡಿದ್ದಾನೆ. ಮರುದಿನ ಶಿವಮ್ಮ ಪತಿ ಮನೆಗೆ ಬಂದಾಗ ತಾಯಿ-ಮಕ್ಕಳ ಶವ ಕಂಡು ಶಾಕ್ ಆಗಿದ್ದರು. ಸದ್ಯ ಕೊಲೆ ಆರೋಪಿ ಅರೆಸ್ಟ್ ಆಗಿದ್ದಾನೆ.
ಘಟನೆಯ ಬಗ್ಗೆ ಎಸ್ಪಿ ಮಹಮ್ಮದ್ ಸುಜಿತ ಅವರು ಪ್ರತಿಕ್ರಿಯಿಸಿ, ''ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಮೇರೆಗೆ ಒಂದು ಯುಡಿಆರ್ ಅನ್ನು ದಾಖಲಿಸಿದ್ದೇವೆ. ಹಾಗೂ ತನಿಖೆಯನ್ನು ಮುಂದುವರೆಸಿದ್ದೇವೆ. ತನಿಖೆಯ ವೇಳೆ ಸಂತ್ರಸ್ತರ ತಾಯಿ ಕೆಲವೊಂದು ಸಂಶಯವನ್ನು ನಮ್ಮ ಗಮನಕ್ಕೆ ತಂದರು. ತನಿಖೆಯ ವೇಳೆ ಮೃತರ ಮನೆಯಲ್ಲಿ ನಿಂಗಪ್ಪ ಎಂಬಾತ ವಾಸವಾಗಿದ್ದ ಎಂಬುದು ತಿಳಿದುಬಂತು. ನಿಂಗಪ್ಪ ತೀರಿಕೊಂಡಿರುವ ಶಿವಮ್ಮನ ಜೊತೆಗೆ ಕಳೆದ ಒಂದು ವರ್ಷದಿಂದ ಪರಿಚಯ ಹೊಂದಿದ್ದ. ಆ ಸಮಯದಲ್ಲಿ ಅವರಿಗೆ ಸ್ವಲ್ಪ ಹಣಕಾಸು ವ್ಯವಹಾರ ನಡೆಯುತ್ತಿತ್ತು. ಅದಾದ ಮೇಲೆ ಶಿವಮ್ಮ ಹಾಗೂ ಅವರ ಗಂಡ ಹಾಸನ ಜಿಲ್ಲೆಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಈ ಸಮಯದಲ್ಲಿ ಇವರು ಪರಿಚಯವನ್ನು ಮುಂದುವರೆಸಿದ್ದರು. ಇವರ ಮನೆಯಲ್ಲಿ ಡ್ರೈವರ್ ಆಗಿ ನಿಂಗಪ್ಪ ಕೆಲಸ ನಿರ್ವಹಿಸುತ್ತಿದ್ದ.
ಇವರಿಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಮೈಮನಸ್ಸು ಇತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ವಿಚಾರವಾಗಿ ಕಳೆದ ಡಿಸೆಂಬರ್ 25 ರಂದು ನಿಂಗಪ್ಪ ಇವರ ಮನೆಗೆ ಬಂದಿದ್ದ. ಅವಾಗಿನಿಂದ ನಿಂಗಪ್ಪ ಡ್ರೈವರ್ ಕೆಲಸ ಮಾಡಿಕೊಂಡು ಇದ್ದ. ಜನವರಿ 1 ರಂದು ಈ ವಿಚಾರವಾಗಿ ಮಾತನಾಡುವಾಗ ಮಾತಿಗೆ ಮಾತು ಬೆಳೆದಿದೆ. ಮೊದಲು ಶಿವಮ್ಮಳನ್ನು ಕೊಲೆ ಮಾಡಿದ್ದಾನೆ. ಆ ಸಮಯದಲ್ಲಿ ಇಬ್ಬರು ಮಕ್ಕಳು ಬಂದಿದ್ದಾರೆ. ಆಗ ಅವರನ್ನೂ ಸಹ ಕೊಂದಿದ್ದಾನೆ. ಅಲ್ಲದೇ ಶಿವಮ್ಮಳ ಕೊರಳಲ್ಲಿದ್ದ ಸರವನ್ನು ಕಿತ್ತುಕೊಂಡು ವಾಪಸ್ ವಿಜಯಪುರಕ್ಕೆ ಹೋಗಿದ್ದಾನೆ ಎಂಬ ಮಾಹಿತಿ ಬಂತು. ತನಿಖೆ ಮುಂದುವರೆಸಿದಾಗ ನಿಂಗಪ್ಪನೇ ಕೊಲೆ ಮಾಡಿದ್ದಾನೆ ಎಂಬುದು ತಿಳಿದುಬಂತು'' ಎಂದು ಎಸ್ಪಿ ವಿವರಿಸಿದ್ದಾರೆ.
ಇದನ್ನೂ ಓದಿ :ವಿಜಯಪುರ: ಸೈಡ್ಗೆ ಹೋಗೆಂದು ಬುದ್ಧಿವಾದ ಹೇಳಿದ್ದಕ್ಕೆ ವೃದ್ಧನಿಗೆ ಚಾಕು ಇರಿದು ಕೊಲೆ; ಆರೋಪಿ ಪರಾರಿ