ಹಾಸನ: ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು, ಊರು ತಲುಪಲು ಸಾಧ್ಯವಾಗದೇ, ಹಸಿವು ತಾಳಲಾರದೆ ವ್ಯಕ್ತಿಯೊಬ್ಬ ಕಸದ ರಾಶಿಯಲ್ಲಿ ಬಿದ್ದಿದ್ದ ಆಹಾರವನ್ನು ಹೆಕ್ಕಿ ಹಕ್ಕಿಯಂತೆ ಅಗುಳನ್ನು ತಿನ್ನುತ್ತಿದ್ದ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ.
ಒಂದೆಡೆ ಉದ್ಯೋಗ ಕಸಿದುಕೊಂಡ ಹೆಮ್ಮಾರಿ,ಮತ್ತೊಂದೆಡೆ ಊರಿಗೆ ಹೋಗಲು ಹಣವಿಲ್ಲ. ಆದರೂ ಹಸಿದ ಹೊಟ್ಟೆಗೆ ಇದೆಲ್ಲಾ ಅರಿವಾಗೋದಿಲ್ಲವಲ್ಲ. ಹೀಗಾಗಿಯೇ ವ್ಯಕ್ತಿಯೋರ್ವ ಈ ಕೆಲಸ ಮಾಡಿದ್ದಾನೆ. ಹಸಿವಿನ ಸಂಕಟ ತಾಳಲಾರದೆ ರಸ್ತೆ ಬದಿ ಕಸದ ರಾಶಿಯಲ್ಲಿ ಬಿದ್ದಿದ್ದ ಅನ್ನದಗುಳನ್ನು ಹುಡುಕಿ ತಿನ್ನುತ್ತಿರೋ ಈ ವ್ಯಕ್ತಿಯ ಹೆಸರು ರಾಜು. ವಯಸ್ಸು ಅಂದಾಜು 38.
ತಿ ಇಲ್ಲದೆ ಕಸದ ರಾಶಿಯಲ್ಲಿನ ಅನ್ನದಗುಳು ತಿಂದ ಕಾರ್ಮಿಕ! ಆಲೂರು ತಾಲೂಕಿನ ಕೋನೆಪೇಟೆ ರಸ್ತೆಯಲ್ಲಿ ಈ ದೃಶ್ಯ ಕಂಡುಬಂತು. ರಾಜು ಮೂಲತ: ಅರಸೀಕೆರೆ ತಾಲೂಕು ತಂತನಹಳ್ಳಿಕೆರೆ ಗ್ರಾಮದವನು. ಈ ಬಗ್ಗೆ ದಾರಿಹೋಕ ಸಾರ್ವಜನಿಕರೊಬ್ಬರು ವಿಚಾರಿಸಿದಾಗ, 'ಹಸಿವು ತಡೆಯಲಾಗದೆ ಹೀಗೆ ಮಾಡುತ್ತಿದ್ದೇನೆ. ಶುಂಠಿ ತೋಟದ ಕೆಲಸಕ್ಕೆಂದು ವರ್ಷದ ಹಿಂದೆ ಆಲೂರಿಗೆ ಬಂದಿದ್ದೆ. ಆದರೆ ಈಗ ಕೆಲಸ ಕೈ ಕೊಟ್ಟಿದೆ. ಊರಿಗೆ ಹೋಗಲು ನನ್ನ ಬಳಿ ದುಡ್ಡಿಲ್ಲ. ಪರಿಚಿತರು ಎಂದು ಹೇಳಿಕೊಳ್ಳಲು ಯಾರೂ ಇಲ್ಲ' ಎಂದು ರಾಜು ನೋವು ತೋಡಿಕೊಂಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ್ ಮನೆಯಿಂದ ಆಹಾರ ತಂದು ಉಣಬಡಿಸಿ ಮಾನವೀಯತೆ ಮೆರೆದರು. ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಸಿಬ್ಬಂದಿ ಜತೆಗೆ ಬಂದು ರಾಜು ಅವರಿಗೆ ಕೊರೊನಾ ಪರೀಕ್ಷೆ ನಡೆಸಿದರು. ಆ ಬಳಿಕ ಆನಂದ್ ಅವರೇ ತಮ್ಮ ಮನೆಗೆ ರಾಜುನನ್ನು ಕರೆದುಕೊಂಡು ಹೋಗಿದ್ದು, ಗಾರೆ ಕೆಲಸ ನೀಡುವುದಾಗಿ ಭರವಸೆ ನೀಡಿದರು.