ಕರ್ನಾಟಕ

karnataka

ETV Bharat / state

2020ರ ಹಾಸನದಲ್ಲಿ ನಡೆದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ನೋಟ - ಹಾಸನದಲ್ಲಿ ನಡೆದ ಅಪರಾಧ ಪ್ರಕರಣ

ರಾಜಕೀಯ ಜಿದ್ದಾಜಿದ್ದಿಗೆ ಪ್ರಸಿದ್ಧಿಯಾಗಿರುವ ಜಿಲ್ಲೆ ಹಾಸನ ಅಪರಾಧ ಪ್ರಕರಣಗಳಲ್ಲೇನೂ ಹಿಂದೆ ಬಿದ್ದಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಕೊರೊನಾ ಇದ್ದರೂ ಕೂಡಾ ಅಪರಾಧ ಪ್ರಕರಣ ಸಂಖ್ಯೆಯೇನು ಕಡಿಮೆಯಾಗಿಲ್ಲ. 2020ರಲ್ಲಿ ಹಾಸನ ಜಿಲ್ಲೆಯಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತ ಮಾಹಿತಿ ಇಲ್ಲಿದೆ..

Hassan
ಹಾಸನ

By

Published : Dec 29, 2020, 10:32 PM IST

ಹಾಸನ: ಹಾಸನ ಜಿಲ್ಲೆಗೂ ಅಪರಾಧ ಪ್ರಕರಣಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧ. ಯಾವ ಪೊಲೀಸ್ ಅಧಿಕಾರಿ ಬಂದ್ರೂ ಜಿಲ್ಲೆಯಲ್ಲಿ ಕೊಲೆ ಮತ್ತು ಸುಲಿಗೆ, ಅತ್ಯಾಚಾರ, ಕಳವು ಪ್ರಕರಣಗಳನ್ನ ಕಡಿಮೆ ಮಾಡಲು ಸಾಧ್ಯವಾಗ್ತಿಲ್ಲ. ಕಳೆದ ಬಾರಿಯ ಅಪರಾಧ ಮತ್ತು ಕೊಲೆ ಪ್ರಕರಣಗಳನ್ನ ಗಮನಿಸಿದ್ರೆ, ಈ ಬಾರಿ ಕೊರೋನಾ ಲಾಕ್ ಡೌನ್ ಸಂದರ್ಭದ ನಡುವೆ ಅಂತಹ ಭಾರೀ ಬದಲಾವಣೆ ಕಾಣ್ತಿಲ್ಲ. ಕಳೆದ ಬಾರಿಗೂ ಮತ್ತು ಈ ಬಾರಿಗೂ ಕೇವಲ 200 ಪ್ರಕರಣಗಳ ಅಂತರವಿದ್ದು, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಮಾಮೂಲಿಯಂತೆಯೇ ಇದೆ.

ಹಾಸನ ಅಂದ್ರೆ, ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರೋ ಜಿಲ್ಲೆ. ರಾಜಕೀಯ ಕಾರಣಗಳಿಗೆ ಇಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ಜರುಗಿರೋ ಉದಾಹರಣೆ ಇವೆ. ಇದ್ರ ನಡುವೆ ಕೌಟುಂಬಿಕ ಕಲಹ, ದರೋಡೆ, ದ್ವೇಷ, ವರದಕ್ಷಿಣೆ ಕಿರುಕುಳ ಹೀಗೆ ನಾನಾ ರೀತಿಯಲ್ಲಿಯೂ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಜರುಗಿವೆ. 2019ರಲ್ಲಿ 5,328 ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ 5,573 ಪ್ರಕರಣಗಳು ಡಿ.28ರ ತನಕ ದಾಖಲಾಗಿದೆ. ಕಳೆದ ವರ್ಷಕ್ಕೆ ಹೊಲಿಕೆ ಮಾಡಿದ್ರೆ, ಕೊಲೆ ಪ್ರಕರಣ ಈ ಬಾರಿ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ.

ಹಾಸನ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ ಎಸ್ಪಿ

2018ರಲ್ಲಿ 47 ಪ್ರಕರಣಗಳು ದಾಖಲಾದ್ರೆ, 2019ರಲ್ಲಿ 49 ಪ್ರಕರಣ ದಾಖಲಾಗಿದ್ದು, ಈ ಬಾರಿ 63 ಪ್ರಕರಣ ದಾಖಲಾಗಿದೆ. ಕೊರೋನಾ ನಡುವೆಯೂ ಕೊಲೆ ಪ್ರಕರಣ ಹೆಚ್ಚಾಗಿದ್ದು ಆತಂಕಕ್ಕೀಡುಮಾಡಿದ ವಿಚಾರ. ಇದ್ರ ಜೊತೆಗೆ 93 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಕಳೆದ ಎರಡು ವರ್ಷಕ್ಕೆ ಹೊಲಿಕೆ ಮಾಡಿದ್ರೆ, 2018ರಲ್ಲಿ 47 ಮತ್ತು 2019ರಲ್ಲಿ 111 ಪ್ರಕರಣಗಳು ದಾಖಲಾಗಿದ್ದು, ಈ ವರ್ಷ ಕಡಿಮೆಯಾಗಿದೆ ಎನ್ನಬಹುದು.

ಇನ್ನು 9 ಡಕಾಯಿತಿ ಪ್ರಕರಣ, 21 ರಾಬರಿ ಪ್ರಕರಣ, 298 ಮನೆಗಳ್ಳತನ ಹಾಗೂ 9 ಜಾನುವಾರು ಕಳ್ಳತನಗಳು ಪ್ರಕರಣ ದಾಖಲಾದರೆ, 81 ವಂಚನೆ ಪ್ರಕರಣ, 1 ಖೋಟಾನೋಟು ಪ್ರಕರಣ ದಾಖಲಾಗುವ ಮೂಲಕ ಸಾಮಾನ್ಯ ಪ್ರಕರಣಗಳಲ್ಲಿ ಇಳಿಮುಖ ಕಂಡಿದ್ದು, ಐಪಿಸಿ ಮೊದಲ ವಿಭಾಗದಲ್ಲಿ ಒಟ್ಟಾರೆ, 612 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 13 ಪ್ರಕರಣಗಳು ಸುಳ್ಳು ಪ್ರಕರಣ ಎಂದು, 6 ಪ್ರಕರಣಗಳು ತನಿಖಾ ಹಂತದಲ್ಲಿದ್ದು, ಒಟ್ಟಾರೆ, 593 ಪ್ರಕರಣಗಳು ದಾಖಲಾಗಿದೆ.

ಇನ್ನು ಹಾಸನ - ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ, ಹಾಸನ - ಅರಸೀಕೆರೆ - ತುಮಕೂರು ರಾಜ್ಯಹೆದ್ದಾರಿ, ಹಾಸನ-ಮೈಸೂರು-ಮಡಿಕೇರಿ-ಚಿಕ್ಕಮಗಳೂರು ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಮೊದಲಿನಿಂದಲೂ ಹೆಚ್ಚಾಗುತ್ತಲೇ ಇದೆ. 2018ರ ರಸ್ತೆ ಅಪಘಾತದಲ್ಲಿ 442 ಪ್ರಕರಣಗಳಲ್ಲಿ 437 ಮಂದಿ ಸಾವಿಗೀಡಾಗಿದ್ದರೆ, 2019ರಲ್ಲಿ 432 ಪ್ರಕರಣಗಳಲ್ಲಿ 429 ಮಂದಿ ಅಪಘಾತದಲ್ಲಿ ಮರಣ ಹೊಂದಿದ್ದಾರೆ. ಇನ್ನು 2020ರಲ್ಲಿ ಕೊರೊನಾ ಹಿನ್ನೆಲೆಯಲ್ಲಿಯೂ 304(ಎ) ಅನ್ವಯವಾಗುವ ಅಪಘಾತ ಪ್ರಕರಣ ಕಡಿಮೆಯಾಗದೇ, 364 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇದ್ರ ಜೊತೆಗೆ 1400 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ರಸ್ತೆ ಸುರಕ್ಷತೆಯನ್ನ ಕಾಪಾಡದೇ ಇರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಪೊಲೀಸ್ ವರಿಷ್ಠಾಧಿಕಾರಿ.

ಇನ್ನು 304(ಬಿ) ಅನ್ವಯವಾಗುವ ವರದಕ್ಷಿಣೆ ಕಿರುಕುಳದಿಂದ ಸಾವಿನ ಪ್ರಕರಣದಲ್ಲಿಯೂ ಹೆಚ್ಚಳ ಕಂಡಿದೆ. 2018ರಲ್ಲಿ 6 ಪ್ರಕರಣ, 2019ರಲ್ಲಿ 13 ಪ್ರಕರಣ ದಾಖಲಾಗಿದ್ದು, ಈ ವರ್ಷ 14 ಮಂದಿ ಮಹಿಳೆಯರು ಸಾವಿಗೀಡಾಗಿದ್ದಾರೆ. ಇದರ ಜೊತೆಗೆ 498(ಬಿ) ಪ್ರಕರಣದಡಿ 156 ಪ್ರಕರಣ ದಾಖಲಾಗಿದ್ದು, 2018 ಮತ್ತು 2019ಕ್ಕೆ ಹೋಲಿಕೆ ಮಾಡಿದರೆ ವರದಕ್ಷಿಣೆ ಕಿರುಕುಳ ಪ್ರಕರಣ ಎರಡು ಪಟ್ಟು ಹೆಚ್ಚಾಗಿದೆ. ಇದ್ರ ಜೊತೆಗೆ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣ ಕಳೆದ ಮೂರು ವರ್ಷಗಳಲ್ಲಿ ಏರಿಳಿತ ಕಂಡಿದ್ದು, 2018 ರಲ್ಲಿ, 20 ಪ್ರಕರಣ, 2019ರಲ್ಲಿ 19 ಪ್ರಕರಣ ಹಾಗೂ 2020ರ ಡಿ.ಅಂತ್ಯಕ್ಕೆ 16 ಪ್ರಕರಣ ದಾಖಲಾಗಿದ್ದು ಅತ್ಯಾಚಾರ ಪ್ರಕರಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಬಹುದು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಳೆದೆರಡು ವರ್ಷಗಳಿಗೆ ಹೊಲಿಕೆ ಮಾಡಿದರೆ, ಕೊಂಚ ಕಡಿಮೆಯಾದರೂ, ಪೋಕ್ಸೋ ಪ್ರಕರಣವನ್ನ ಕಡಿಮೆ ಮಾಡಲು ಸಾಧ್ಯವಾಗಿಲ್ಲ. 2018ರಲ್ಲಿ 80 ಪ್ರಕರಣ ಮತ್ತು 2019ರಲ್ಲಿ 88 ಪೋಕ್ಸೋ ಪ್ರಕರಣ ದಾಖಲಾಗಿದ್ದು, 2020ರಲ್ಲಿಯೂ 76 ಪ್ರಕರಣ ದಾಖಲಾಗಿದ್ದು, ಲಾಕ್​ಡೌನ್ ವೇಳೆಯಲ್ಲಿಯೂ ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆಯೇ ಸರಿ.

ಇನ್ನು ಸರ್ಕಾರಿ ನೌಕರರ ಮೇಲಿನ ಹಲ್ಲೆ, ಕರ್ತವ್ಯಕ್ಕೆ ಅಡ್ಡಿ ಪಡಿಸುವಿಕೆ ಪ್ರಕರಣಗಳು ಸೇರಿದಂತೆ ಇತರ ಸಾಮಾನ್ಯ ಪ್ರಕರಣಗಳು ಕಳೆದ 2 ವರ್ಷಗಳಿಂದ ಸಮತೋಲನವನ್ನ ಕಾಯ್ದುಕೊಂಡಿದ್ದು, 2018ರಲ್ಲಿ 320 ಪ್ರಕರಣ, 2019ರಲ್ಲಿ 304 ಪ್ರಕರಣ ದಾಖಲಾದ್ರೆ, 2020ರಲ್ಲಿ 475 ಪ್ರಕರಣಗಳು ದಾಖಲಾಗಿದೆ. ಇದ್ರ ಜೊತೆಗೆ ಜಿಲ್ಲೆಯಲ್ಲಿ ಪ.ಜಾತಿ ಮತ್ತು ಪ.ಪಂ.ದ ದೌರ್ಜನ್ಯ ಪ್ರಕರಣಗಳು ಈ ಬಾರಿ ಹೆಚ್ಚಾಗಿದ್ದು, 2018ರಲ್ಲಿ 62 ಪ್ರಕರಣ ಹಾಗೂ ಕಳೆದ ವರ್ಷ 59 ಪ್ರಕರಣ ದಾಖಲಾದ್ರೆ, ಈ ವರ್ಷ 95 ಪ್ರಕರಣ ದಾಖಲಾಗಿದೆ. ಈ ಮೂಲಕ ತುಳಿತಕ್ಕೆ ಒಳಗಾದವರ ಮೇಲೆ ಸವರ್ಣಿಯರ ದೌರ್ಜನ್ಯ ಹೆಚ್ಚಾಗುತ್ತಿದೆ ಎಂಬುದು ಗೊತ್ತಾಗುತ್ತಿದೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ನಡೆದ ಕೆಲ ಪ್ರಮುಖ ಅಪರಾಧ ಪ್ರಕರಣಗಳ ಮಾಹಿತಿಗಳನ್ನ ನೋಡುವುದಾದರೆ..

  • ಚನ್ನರಾಯಪಟ್ಟಣದಲ್ಲಿ ಪಾರಿವಾಳಕ್ಕಾಗಿ ನಡೆದ ಕೊಲೆ ಪ್ರಕರಣ
  • ಕುಡಿದ ಅಮಲಿನಲ್ಲಿ ಜಗಳ ಬಿಡಿಸಲು ಹೋಗಿ ಕೊಲೆಯಾದ ಪ್ರಕರಣ
  • ದರೋಡೆ ಮಾಡಿ ದಂಪತಿ ಹತ್ಯೆ ಮಾಡಿದ ಪ್ರಕರಣ
  • 2000 ಕೊಡಲಿಲ್ಲ ಎಂದು ಮಾಲೀಕನನ್ನೇ ಕೊಲೈ ಮಾಡಿರುವ ಅರಸೀಕೆರೆ ತಾಲೂಕಿನ ಪ್ರಕರಣ.
  • ಸಕಲೇಶಪುರದಲ್ಲಿ ಹೈಟೆಕ್ ಹನಿಟ್ರ್ಯಾಪ್ ದಂಧೆ
  • ಚನ್ನರಾಯಪಟ್ಟಣದಲ್ಲಿ ನಡೆದಿದ್ದ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಶೂಟೌಟ್ ಪ್ರಕರಣ
  • ಪಿಎಸ್ಐ ಕಿರಣ್ ಆತ್ಮಹತ್ಯೆ ಪ್ರಕರಣ
  • ಸಕಲೇಶಪುರ ಮೂಲದ ವ್ಯಕ್ತಿಯೊಬ್ಬನನ್ನ ಹಾಸನದ ಹೊರವಲಯದಲ್ಲಿ ಕೊಲೆ ಮಾಡಿದ ಪ್ರಕರಣ
  • ಬೇಲೂರಿನಲ್ಲಿ ನಡೆದ ದರೋಡೆ ಪ್ರಕರಣ.
  • ಹೊಸ ಬಸ್ ನಿಲ್ದಾಣದ ಸಮೀಪ ಅಪರಿಚಿತ ವ್ಯಕ್ತಿಯನ್ನ ಸುಟ್ಟು ಹಾಕಿದ ಪ್ರಕರಣ.
  • ಇತ್ತೀಚೆಗೆ ನಡೆದ ಬೆಂಗಳೂರಿನ ಶಾಂತಿನಗರದ ರೌಡಿಶೀಟರ್ ಲಿಂಗರಾಜು ಕೊಲೆ ಪ್ರಕರಣ.
  • ಹಾಸನದ ಅರಳೀಕಟ್ಟೆ ಸರ್ಕಲ್​ನಲ್ಲಿ ನಡೆದ ರಘುಗೌಡನ ಕೊಲೆ ಪ್ರಕರಣ
  • ಚನ್ನರಾಯಪಟ್ಟಣದ ಬೇಡಿಗನಹಳ್ಳಿಯಲ್ಲಿ ನಡೆದ ಸುಫಾರಿ ಕೊಲೆ ಪ್ರಕರಣ.
  • ಅರಕಲಗೂಡಿನಲ್ಲಿ ನಡೆದ ವರದಕ್ಷಿಣೆ ಕೊಲೆ ಪ್ರಕರಣ.
  • ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣ
  • ಕುಡಿದ ಅಮಲಿನಲ್ಲಿ ಹಾಸನದ ರಿಂಗ್ ರಸ್ತೆಯಲ್ಲಿ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣ.
  • ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಗಂಡ ಮತ್ತು ಮೈದುನನಿಂದ ಕೊಲೆಯಾದ ಸುಶ್ಮಿತಾ ಪ್ರಕರಣ.
  • ವರದಕ್ಷಿಣೆಗಾಗಿ ಹೆಂಡತಿಯನ್ನ ನಡುರಸ್ತೆಯಲ್ಲಿಯೇ ಕೊಚ್ಚಿಹಾಕಿದ ಕೆ.ಎಸ್.ಆರ್.ಟಿ.ಸಿ ಚಾಲಕ
  • ಮಗಳೊಂದಿಗೆ ಅನೈತಿಕ ಸಂಬಂಧ, ಹೆಂಡತಿ ಮಾವನಿಂದ ಕೊಲೆಯಾದ ಗಂಡ
  • ಕನ್ನಿಕ ಪರಮೇಶ್ವರಿ ಬ್ಯಾಂಕ್ ಮುಂಭಾಗ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ.
  • ಕ್ಷುಲ್ಲಕ ಕಾರಣಕ್ಕೆ ಮಧು ಎಂಬುವನನ್ನು ಗನ್ ಮೂಲಕ ಶೂಟ್ ಮಾಡಿ ಕೊಲೆ ಮಾಡಿದ ಪ್ರಕರಣ
  • ಆಸ್ತಿವಿಚಾರದಲ್ಲಿ ಜಗಳ ದಾಯಾದಿಗಳಿಂದಲೇ ಪುಟ್ಟಸ್ವಾಮಯ್ಯನ ಕೊಲೆ ಪ್ರಕರಣ
  • ಬೈಕ್ ವಿಚಾರಕ್ಕೆ ಕುಡಿದ ಅಮಲಿನಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿದ ನಾರೀಹಳ್ಳಿ ಪ್ರಕರಣ.
  • ಕುಡಿದವನಿಗೆ ಬುದ್ದಿವಾದ ಹೇಳಿದಕ್ಕೆ ಕೊಲೆ ಮಾಡಿದ ಪ್ರಕರಣ.
  • ಹಾಸನದ ಹೊರವಲಯದ ಹೊಸಕೊಪ್ಪಲಿನ ಕೆ.ಐ.ಎ.ಡಿ.ಬಿ.ಬಳಿಯಲ್ಲಿ ನಡೆದ ಕೊಲೆ ಪ್ರಕರಣ.

ಒಟ್ಟಾರೆ, ಇದರ ಜೊತೆಗೆ ಜೂಜು, ಇಸ್ಟೀಟ್, ಮಟ್ಕಾ, ಕಾನೂನು ಬಾಹಿರ ಚಟುವಟಿಕೆ ಮತ್ತು ಕಾನೂನು ಉಲ್ಲಂಘನೆ, ಅಕ್ರಮ ಮದ್ಯ ಮಾರಾಟ, ಶಾಂತಿ ಭಂಗ, ಬಡಿದಾಟ, ಪ್ರತಿಭಟನೆ, ಗುಂಪುಗಾರಿಕೆ ಮಕ್ಕಳ ಮಾರಾಟ, ಕಳ್ಳತನ, ನಾಪತ್ತೆ ಸೇರಿದಂತೆ ಜಿಲ್ಲೆಯಲ್ಲಿ ಈ ವರ್ಷ ಸುಮಾರು 5,573 ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೇ, ಈ ವರ್ಷ ಕೊರೋನಾ ನಡುವೆಯೂ 200 ಪ್ರಕರಣಗಳು ಹೆಚ್ಚಾಗಿರುವುದು ಆತಂಕಕಾರಿ ಬೆಳವಣಿಗೆ ಎನ್ನಬಹುದು.

ABOUT THE AUTHOR

...view details