ಸಕಲೇಶಪುರ(ಹಾಸನ):ಎತ್ತಿನಹೊಳೆ ಯೋಜನೆಯ ಪವರ್ ಪ್ಲಾಂಟ್ ಹೈ ಟೆನ್ಷನ್ ತಂತಿ ಹಾದು ಹೋಗಲು ಟವರ್ ನಿರ್ಮಾಣಕ್ಕೆಂದು ತೆಗೆದ ಗುಂಡಿಗೆ ಬಾಲಕನೊಬ್ಬ ಬಿದ್ದು ಬಲಿಯಾಗಿರುವ ಘಟನೆ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎತ್ತಿನಹೊಳೆ ಕಾಮಗಾರಿಯಾಗುತ್ತಿರುವ ಸ್ಥಳ ತಾಲೂಕಿನ ಬೆಳಗೋಡು ಹೋಬಳಿ ಶಿಡಗಳಲೆ ಗ್ರಾಮದ ಋತ್ವಿಕ್ (13) ಮೃತಪಟ್ಟ ದುರ್ದೈವಿ. ಹೆಬ್ಬನಹಳ್ಳಿ ಸಮೀಪ ದನ ಮೇಯಿಸಲು ತೆರಳಿದಾಗ ಆಕಸ್ಮಿಕವಾಗಿ ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಘಟನೆಯ ವಿವರ:
ತಾಲೂಕಿನ ಬೆಳಗೋಡು ಹೋಬಳಿಯ ಹೆಬ್ಬನಹಳ್ಳಿ ಸಮೀಪ ಎತ್ತಿನಹೊಳೆ ಯೋಜನೆಯ ಪವರ್ ಪ್ಲಾಂಟ್ ಹೈ ಟೆನ್ಷನ್ ತಂತಿ ಹಾದು ಹೋಗಲು ಟವರ್ ನಿರ್ಮಾಣಕ್ಕೆ ಎಂದು ಗುತ್ತಿಗೆ ಪಡೆದ ಕಂಪನಿಯೊಂದು ಸುಮಾರು 20 ಅಡಿ ಆಳ ಗುಂಡಿ ತೆಗೆದು ಟವರ್ ನಿರ್ಮಾಣ ಮಾಡಿತ್ತು. ಆದರೆ, ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದಾಗಿ ಗುಂಡಿಯಲ್ಲಿ ನೀರು ತುಂಬಿದ್ದು, ಗುಂಡಿಯ ಆಳ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇಂದು ಬೆಳಗ್ಗೆ ಸುಮಾರು 11 ಗಂಟೆಯ ವೇಳೆಯಲ್ಲಿ ಬಾಲಕ ದನ ಮೇಯಿಸಲು ಹೋದಾಗ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದಾನೆ.
ಬೆಳಗ್ಗೆ 11 ಗಂಟೆಗೆ ನಡೆದ ದುರ್ಘಟನಾ ಸ್ಥಳಕ್ಕೆ ಯೋಜನೆಯ ಅಧಿಕಾರಿಗಳು ಸಂಜೆಯವರೆಗೂ ಬಂದಿರಲಿಲ್ಲ. ಮೃತ ಬಾಲಕನ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂ. ಪರಿಹಾರ ನೀಡುವವರೆಗೂ ಮೃತ ದೇಹವನ್ನು ತೆಗೆಯುವುದಿಲ್ಲ ಎಂದು ಟವರ್ ಸಮೀಪವೇ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಅಂತಿಮವಾಗಿ ಸಂಜೆಯ ವೇಳೆಗೆ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು ಹಾಗೂ ಯೋಜನೆಯ ಅಭಿಯಂತರರೊಬ್ಬರು ಗ್ರಾಮಸ್ಥರ ಮನವೊಲಿಸಿ ಶವವನ್ನು ಕ್ರಾಫರ್ಡ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಯಿತು.
ಒಟ್ಟಾರೆಯಾಗಿ ಅವೈಜ್ಞಾನಿಕವಾಗಿ ನಿರ್ಮಾಣವಾಗುತ್ತಿರುವ ಎತ್ತಿನಹೊಳೆ ಯೋಜನೆಯಿಂದ ಅಮಾಯಕರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತ ಪಟ್ಟ ಬಾಲಕನ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.