ಕರ್ನಾಟಕ

karnataka

ETV Bharat / state

ಜೆಡಿಎಸ್‌ಗೆ ಕೈಕೊಟ್ಟು ಬಿಜೆಪಿಗೆ ಬೆಂಬಲ; ಹಾಸನ ನಗರಸಭೆಯ 7 ಸದಸ್ಯರಿಗೆ ಸಂಕಷ್ಟ..! - ಹಾಸನ ಜಿಲ್ಲೆ

ಹಾಸನದಲ್ಲಿ ತೆನೆಹೊತ್ತ ಮಹಿಳೆಗೆ ಕೈ ಕೊಟ್ಟು ಬಿಜೆಪಿಗೆ ಬೆಂಬಲ ನೀಡಿರುವ 7 ಮಂದಿ ನಗರಸಭೆ ಸದಸ್ಯರ ವಿರುದ್ಧ ಕ್ರಮಕ್ಕೆ ಜೆಡಿಎಸ್‌ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯಾಧ್ಯಕ್ಷ ಹೆಚ್‌ಕೆ ಕುಮಾರಸ್ವಾಮಿ, ಪಕ್ಷಾಂತರ ಮಾಡಿ ಬಿಜೆಪಿಗೆ ಬೆಂಬಲ ಕೊಟ್ಟಿರುವ 7 ಮಂದಿ ನಗರಸಭೆ ಸದಸ್ಯರು ಜೆಡಿಎಸ್‌ಗೆ ರಾಜೀನಾಮೆ ನೀಡಿಲ್ಲ ಎಂದು ಹೇಳಿದ್ದಾರೆ.

7 JDS Municipal Council members distressed in Hassan
ಜೆಡಿಎಸ್‌ಗೆ ಕೈಕೊಟ್ಟು ಬಿಜೆಪಿಗೆ ಬೆಂಬಲ; ಹಾಸನ ನಗರಸಭೆಯ 7 ಸದಸ್ಯರಿಗೆ ಸಂಕಷ್ಟ..!

By

Published : Jun 24, 2021, 1:50 AM IST

ಹಾಸನ:ಅಭಿವೃದ್ಧಿ ವಿಚಾರದಲ್ಲಿ ಹಾಗೂ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಅರಸೀಕೆರೆ ನಗರಸಭಾ ಮಾಜಿ ಅಧ್ಯಕ್ಷ ಸಮೀವುಲ್ಲಾ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ನೀಡಿ ಆಪರೇಷನ್ ಕಮಲಕ್ಕೆ ಸಿಲುಕಿ ಪಕ್ಷಾಂತರ ಮಾಡಿದ ಏಳು ಸದಸ್ಯರಿಗೆ ಸಂಕಷ್ಟ ಎದುರಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಪಕ್ಷಾಂತರಿಗಳಿಗೆ ನೋಟಿಸ್ ಜಾರಿಗೆ ಜೆಡಿಎಸ್ ಮುಂದಾಗಿದೆ.

ಈ ಬಗ್ಗೆ ಮಾತನಾಡಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌ಕೆ ಕುಮಾರಸ್ವಾಮಿ, ಪಕ್ಷಾಂತರ ಮಾಡಿ ಬಿಜೆಪಿಗೆ ಬೆಂಬಲ ಕೊಟ್ಟಿರುವ 7 ಮಂದಿ ನಗರಸಭೆ ಸದಸ್ಯರು ಜೆಡಿಎಸ್‌ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಮಗೆ ಒಂದು ಪತ್ರವನ್ನು ನೀಡಿದ್ದಾರೆ. ಆದರೆ ನನಗೆ ಯಾವ ಸದಸ್ಯರು ಕೂಡ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರಾಜೀನಾಮೆ ಪತ್ರವನ್ನು ನೀಡಿಲ್ಲ ಎಂದು ಹೇಳಿದ್ದಾರೆ.

ಇವರ ನಡೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಭಾವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಪಕ್ಷ ದ್ರೋಹ ಕೆಲಸ ಮಾಡಿರುವ ಏಳು ಮಂದಿ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬಹುದು ಎಂಬುದರ ಚರ್ಚೆ ಮಾಡಿ ನಂತರ ಅವರಿಗೆ ನೋಟಿಸ್ ನೀಡಲಾಗುವುದು ಎಂದರು.

ಇದನ್ನೂ ಓದಿ: ರಾಜ್ಯ ರಾಜಧಾನಿಯಲ್ಲೂ ಡೆಲ್ಟಾ ಪ್ಲಸ್ ವೈರಸ್ ಪ್ರಕರಣ ಪತ್ತೆ- ಆರೋಗ್ಯ ಸಚಿವ ಡಾ.ಸುಧಾಕರ್

ಆಪರೇಷನ್ ಕಮಲದ ಮೂಲಕ ಜೆಡಿಎಸ್ ಪಕ್ಷದ ಏಳು ಮಂದಿ ನಗರಸಭೆ ಸದಸ್ಯರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎನ್‌.ಆರ್ ಸಂತೋಷ್ ನೇತೃತ್ವದಲ್ಲಿ ಬಿಜೆಪಿಗೆ ಬರುವಂತೆ ಆಮಿಷ ಒಡ್ಡಿದ್ದರು. ನಮ್ಮ ಪಕ್ಷದ ಮುಗ್ಧ ಸದಸ್ಯರು ಆಪರೇಷನ್ ಕಮಲಕ್ಕೆ ಸಿಲುಕಿದ್ದಾರೆ ಎನ್ನುವುದು ಜೆಡಿಎಸ್ ಮುಖಂಡರ ಗಂಭೀರ ಆರೋಪವಾಗಿದೆ.

ಪಕ್ಷದಿಂದ ಹೊರ ಹೋಗಿರುವ ಸದಸ್ಯರು ಸ್ವಯಂಪ್ರೇರಿತವಾಗಿ ಅವರೇ ವಾಪಸ್ ಬಂದರೆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯ ಮಾಡಲಾಗುತ್ತದೆ. ಇಲ್ಲದಿದ್ದರೆ, ಕಾನೂನು ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎನ್ನುತ್ತಾರೆ ಹೆಚ್‌ಕೆ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ABOUT THE AUTHOR

...view details