ಹಾಸನ: ಕೊಲೆ ಮಾಡಲು ಪ್ರಯತ್ನಪಟ್ಟಿದ್ದ ಇಬ್ಬರು ಆರೋಪಿಗಳು, ಆರೋಪಿಯನ್ನು ಬಂಧಿಸಿದ್ದ ಪೊಲೀಸರಿಗೆ, ಠಾಣೆ ಸಿಬ್ಬಂದಿ ಹಾಗೂ ಹಲ್ಲೆಗೊಳಗಾದ ಯುವಕ ಸೇರಿದಂತೆ 6 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿರುವ ಘಟನೆ ಹಾಸನ ನಗರದಲ್ಲಿ ನಡೆದಿದೆ.
ಜು.11ರಂದು ಯುವತಿಯ ವಿಚಾರವಾಗಿ ಎರಡು ಕೋಮಿನ ಯುವಕರ ನಡುವೆ ಜಗಳವಾಗಿತ್ತು. ಜಗಳ ತಾರಕಕ್ಕೇರಿದ ಹಿನ್ನಲೆ, ಇರ್ಫಾನ್ ಎಂಬ ಯುವಕನಿಗೆ ಮತ್ತೊಂದು ಕೋಮಿನ 8 ಮಂದಿ ಯುವಕರು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲು ಪ್ರಯತ್ನಪಟ್ಟಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ನಗರದ ಪೆನ್‌ಷನ್ ಮೊಹಲ್ಲಾ ಠಾಣೆಯಲ್ಲಿ 307 ಅಡಿ ಪ್ರಕರಣ ಕೂಡಾ ದಾಖಲಾಗಿತ್ತು.
ಕೊಲೆ ಮಾಡಲು ಯತ್ನಿಸಿದ ಆರೋಪಿಗಳಾದ ವೆಂಕಟೇಶ, ಕಾರ್ತಿಕ್, ಕಿರಣ್, ಸಿದ್ದೇಶ, ಮಹೇಶ್, ಮಧು, ಸುಭಾಶ್ ಮತ್ತು ಕಿಶೋರ್ ಎಂಬುವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪೈಕಿ ಇಬ್ಬರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊಲೆ ಯತ್ನ ಪ್ರಕರಣ; 6 ಮಂದಿಗೆ ಸೋಂಕು ದೃಢ!
ಕೊಲೆ ಮಾಡಲು ಪ್ರಯತ್ನಪಟ್ಟಿದ್ದ ಇಬ್ಬರು ಆರೋಪಿಗಳು, ಆರೋಪಿಯನ್ನು ಬಂಧಿಸಿದ್ದ ಪೊಲೀಸರಿಗೆ, ಠಾಣೆ ಸಿಬ್ಬಂದಿ ಹಾಗೂ ಹಲ್ಲೆಗೊಳಗಾದ ಯುವಕ ಸೇರಿದಂತೆ 6 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜು.21ರಂದು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಇದಕ್ಕೂ ಮುನ್ನ ಇವರುಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿತ್ತು. ಇಂದು ಪರೀಕ್ಷಾ ವರದಿ ಬಂದಿದ್ದು, ವರದಿಯಲ್ಲಿ ಕೊಲೆ ಮಾಡಲು ಪ್ರಯತ್ನ ಪಟ್ಟ 8 ಮಂದಿ ಆರೋಪಿಗಳಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಇದಲ್ಲದೇ ಹಲ್ಲೆಗೊಳಗಾದ ಯುವಕನಿಗೂ ಕೂಡಾ ಕೊರೊನಾ ಪಾಸಿಟಿವ್ ಬಂದಿದೆ.
ಸದ್ಯ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಡಿವೈಎಸ್ಪಿ ಮತ್ತು ಪೆನ್‌ಷನ್ ಮೊಹಲ್ಲಾ ಠಾಣೆಯ ಜೀಪ್ ಚಾಲಕ ಸೇರಿದಂತೆ ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕು ತಗುಲಿದ ಆರೋಪಿಗಳನ್ನು ಕೋವಿಡ್-19 ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಉಳಿದಂತೆ ಪೊಲೀಸ್ ಸಿಬ್ಬಂದಿಯನ್ನು ನಗರದ ಶ್ರೀ ಮಂಜುನಾಥೇಶ್ವರ ಆಯುರ್ವೇದಿಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.