ಹಾಸನ: ಎಟಿಎಂಗೆ ಹಣ ತುಂಬಿಸುವ ಸಂದರ್ಭದಲ್ಲಿ ದುಷ್ಕರ್ಮಿಗಳು ಹಣದ ಪೆಟ್ಟಿಗೆಯನ್ನೇ ಲಪಟಾಯಿಸಿರುವಂತಹ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಅರಸೀಕೆರೆ ತಾಲೂಕಿನ ಬಾಣಾವರದ SBI ಬ್ಯಾಂಕಿಗೆ ಹಣ ತುಂಬಿಸಲು ಸಿಎಂಎಸ್ ಕಂಪನಿಯ ವಾಹನ ಬಂದಿದೆ. ಬಳಿಕ ಎಟಿಎಂಗೆ ಹಣ ತುಂಬಿಸಲು ವಾಹನದಲ್ಲಿದ್ದ ಹಣದ ಪೆಟ್ಟಿಗೆಯನ್ನು ಕೆಳಗಿಳಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಕೆಲ ದುಷ್ಕರ್ಮಿಗಳು 42 ಲಕ್ಷ ರೂಪಾಯಿ ಇದ್ದ ಹಣದ ಪೆಟ್ಟಿಗೆಯನ್ನು ಕದ್ದು ಪರಾರಿಯಾಗಿದ್ದಾರೆ.
ವಾಹನದಲ್ಲಿ ಚಾಲಕ ಸೇರಿದಂತೆ ಗನ್ ಮ್ಯಾನ್ ಪಾಂಡುರಂಗ ಭರತ್ ಮತ್ತು ರುದ್ರೇಶ್ ನಾಲ್ಕು ಮಂದಿ ಭದ್ರತಾ ಸಿಬ್ಬಂದಿಗೂ ಗೊತ್ತಾಗದಂತೆ ಹಣವನ್ನು ಲಪಟಾಯಿಸಿರೋದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇನ್ನು ಸ್ಥಳಕ್ಕೆ ಬಾಣವಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಬಾಣವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಹಾಸನ ನಗರದ ಎನ್ ಆರ್ ವೃತ್ತದ ಬಳಿ, ಕೆನರಾ ಬ್ಯಾಂಕಿನಲ್ಲಿ ಇದೇ ರೀತಿ 44 ಲಕ್ಷ ರೂಪಾಯಿಗಳನ್ನು ದುಷ್ಕರ್ಮಿಗಳು ಲಪಟಾಯಿಸಿದ್ದ ಪ್ರಕರಣ ಹಾಗೆ ಉಳಿದಿದೆ. ಇದರ ಬೆನ್ನಲ್ಲಿಯೇ ಇದೇ ರೀತಿಯ ಮತ್ತೊಂದು ಪ್ರಕರಣ ಜರುಗಿದ್ದು, ಕಂಪನಿಯ ವಾಹನ ಸಿಬ್ಬಂದಿ ಮೇಲೆ ಪೊಲೀಸರು ಈಗ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಇಬ್ಬರು ಆರೋಪಿಗಳ ಬಂಧನ