ಹಾಸನ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರಿ ಮಳೆ-ಗಾಳಿಯಿಂದ ಜಿಲ್ಲೆಯಲ್ಲಿ 350 ಕೋಟಿ ರೂ. ನಷ್ಟ ಸಂಭವಿಸಿದ್ದು, ನಷ್ಟ ಪರಿಹಾರಕ್ಕೆ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜನರ ಸ್ಥಳಾಂತರ, ನಿರಾಶ್ರಿತರ ಕೇಂದ್ರಗಳ ಸ್ಥಾಪನೆ, ಮರಗಳ ತೆರವು ಹಾಗೂ ಇತರೆ ತುರ್ತು ಕಾರ್ಯಗಳಿಗೆ ಬಳಸಿಕೊಳ್ಳಲು ಎಸ್‌ಡಿಆರ್‌ಎಫ್‌ನಿಂದ 5 ಕೋಟಿ ರೂ. ಬಿಡುಗಡೆ ಆಗಿದೆ. ಅದರಲ್ಲಿ 4 ಲಕ್ಷ ರೂ. ಖರ್ಚಾಗಿದೆ. ಅತಿವೃಷ್ಟಿ ಪರಿಹಾರ ವಿತರಣೆಗೆ ಹಣ ಬರಬೇಕಿದೆ ಎಂದರು.
ಸಕಲೇಶಪುರ ತಾಲೂಕಿನಲ್ಲಿ ಶೇ 400ಕ್ಕೂ ಅಧಿಕ ಮಳೆಯಾಗಿದೆ. ಜಿಲ್ಲಾದ್ಯಂತ 348 ಮನೆಗಳಿಗೆ ಹಾನಿಯಾಗಿದ್ದು, 119 ಮನೆ ಸಂಪೂರ್ಣವಾಗಿ ಕುಸಿದಿವೆ. 190 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪೂರ್ಣ ಕುಸಿದ ಹಾಗೂ ಶೇ75 ಕ್ಕಿಂತ ಹೆಚ್ಚು ಹಾನಿಗೀಡಾಗಿರುವ ಮನೆಗಳಿಗೆ ತಲಾ 5 ಲಕ್ಷ ರೂ. ಹಾಗೂ ಶೇ 25ಕ್ಕಿಂತ ಕಡಿಮೆ ಹಾನಿಯಾದ ಮನೆಗಳಿಗೆ 50 ಸಾವಿರ ರೂ. ಪರಿಹಾರ ದೊರೆಯಲಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಿಪಿಎಸ್ ಮೂಲಕ ಫೋಟೋ ಅಪ್‌ಲೋಡ್ ಮಾಡುತ್ತಿದ್ದು, ಮುಂದಿನ ವಾರದಿಂದ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ ಎಂದು ಹೇಳಿದರು.