ಅರಸೀಕೆರೆ(ಹಾಸನ): ಹಲ್ಲಿ ಬಿದ್ದ ಬಿಸಿಯೂಟ ಸೇವಿಸಿ 34 ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಅರಸೀಕೆರೆ ತಾಲೂಕಿನ ನಾರಾಯಣಗಟ್ಟಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಮಕ್ಕಳನ್ನು ಅರಸೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಧ್ಯಾಹ್ನ ಬಿಸಿಯೂಟ ಮಾಡುವ ವೇಳೆ ವಿದ್ಯಾರ್ಥಿಯೊಬ್ಬನ ಊಟದಲ್ಲಿ ಸತ್ತ ಹಲ್ಲಿಯ ಬಾಲ ಪತ್ತೆಯಾಗಿತ್ತು.
ವಿದ್ಯಾರ್ಥಿ ತರಕಾರಿ ಇರಬಹುದೆಂದು ಇಲಿಯ ಬಾಲ ಸೇವಿಸಿದ್ದಾನೆ. ಬಳಿಕ ಆತನಿಗೆ ಅನುಮಾನ ಬಂದು ಉಗುಳಿದಾಗ ಹಲ್ಲಿಯ ಬಾಲವೆಂದು ಗೊತ್ತಾಗಿದ್ದು ಅಸ್ವಸ್ಥನಾಗಿದ್ದಾನೆ. ಈ ವಿಚಾರವನ್ನು ತಕ್ಷಣ ಅಡುಗೆ ಮಾಡುವ ಯಶೋಧಮ್ಮನಿಗೆ ತಿಳಿಸಿದಾಗ ಆಕೆ ಗಾಬರಿಗೊಂಡು ಮುಖ್ಯಶಿಕ್ಷಕರಿಗೆ ತಿಳಿಸಿದ್ದಾರೆ. ಅಸ್ವಸ್ಥಗೊಂಡ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಶಾಸಕ ಕೆ.ಎಂ.ಶಿವಲಿಂಗೇಗೌಡ, ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಆತಂಕ ಬೇಡ- ವೈದ್ಯರು: ಶಾಲೆಯಲ್ಲಿರುವ ಸುಮಾರು 34 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದಾರೆ. ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವರದಿ ನೀಡಲಾಗುವುದು. ಪೋಷಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ.